ಬಿಜೆಪಿಗೆ ಎತ್ತಿನಹೊಳೆ ಗಿಫ್ಟ್ ನೀಡಿದ ಕಾಂಗ್ರೆಸ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ದಾಳವಾಗಿ ಮಾಡಿಕೊಂಡು ಧರ್ಮ, ಜಾತಿ ಮೀರಿ ಜನಬೆಂಬಲ ಪಡೆದುಕೊಳ್ಳುತ್ತಿರುವ ಎತ್ತಿನಹೊಳೆ ಯೋಜನೆಯನ್ನು ವಿವಾದವನ್ನಾಗಿ ಮಾಡಿ ಬಿಜೆಪಿ ಪಕ್ಷಕ್ಕೆ ಧಾರೆ ಎರದು ನೀಡಿರುವುದೇ ಕಾಂಗ್ರೆಸ್ ಪಕ್ಷ ಎಂಬುದು ಗಮನಾರ್ಹವಾಗಿದೆ.

ಕಾಂಗ್ರೆಸ್ ಪಕ್ಷವೇ ಹುಟ್ಟು ಹಾಕಿದ ವಿವಾದವನ್ನು ಬಿಜೆಪಿ ಇಂದು ತನ್ನ ರಾಜಕೀಯ ಲಾಭಕ್ಕಾಗಿ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದೆ.

yettinahole-proiect-is-i

ಬಿಜೆಪಿ ಸರಕಾರವೇ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಲ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕುಡಿಯುವ ನೀರಿನ ಬೇಡಿಕೆ ಈಡೇರಿಸಲು ಚಾಲನೆ ನೀಡಿದ ಯೋಜನೆ ಎತ್ತಿನಹೊಳೆ. ಅಂದು ಮುಖ್ಯಮಂತ್ರಿ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಇಂದು ಕೇಂದ್ರ ಸಚಿವರಾಗಿರುವ ಡೀವಿ ಸದಾನಂದ ಗೌಡ ವಿಶೇಷ ಮುತುವರ್ಜಿ ವಹಿಸಿ ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಿದ್ದರು. ಅಂದು ಮತ್ತು ಅನಂತರ ಮೂರು ವರ್ಷ ಸುಮ್ಮನಿದ್ದ ಕರಾವಳಿಯ ಬಿಜೆಪಿ ಮುಖಂಡರು ಈಗ ಕಳೆದೆರಡು ವರ್ಷಗಳಿಂದ ಎತ್ತಿನಹೊಳೆ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವುದು ವಿಪರ್ಯಾಸವಾಗಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿದು ಲೋಕಸಭಾ ಚುನಾವಣೆಗೆ ವೇಳೆ ಇಂದು ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗಿರುವ ಜನಾರ್ದನ ಪೂಜಾರಿ ಅವರ ಕುಮ್ಮಕ್ಕಿನಲ್ಲಿ ನೇತ್ರಾವತಿ ನದಿ ತಿರುವುದರ ವಿರುದ್ಧ ಹೋರಾಟ ಆರಂಭವಾಗಿತ್ತು. ಪೂಜಾರಿ ಹಿಂಬಾಲಕರಾದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಕಾಂಗ್ರೆಸ್ ಪಕ್ಷದಿಂದ ಈಗ ಉಚ್ಛಾಟಿತರಾಗಿರುವ ಹರಿಕೃಷ್ಣ ಬಂಟ್ವಾಳ್ ಅಂದು ಹೋರಾಟಕ್ಕೆ ಕಿಚ್ಚು ಹಚ್ಚಿದವರು.

ಸತತ ಸೋಲಿನ ನಂತರ ಲೋಕಸಭಾ ಚುನಾವಣೆ ಸ್ಪರ್ಧಿಸುವಾಗ ತನ್ನ ಪರವಾಗಿ ಬಲವಾದ ಚುನಾವಣಾ ವಿಚಾರದ ಕೊರತೆ ಇದ್ದ ಸಂದರ್ಭದಲ್ಲಿ ಪೂಜಾರಿ ಬೆಂಬಲಿಗರು ಎತ್ತಿನಹೊಳೆ ಯೋಜನೆಯನ್ನು ಚುನಾವಣಾ ವಿಚಾರ ಮಾಡಲು ಯತ್ನ ನಡೆಸಿದ್ದರು.

ಸಾಮಾನ್ಯವಾಗಿ ಕಾಂಗ್ರೆಸ್ ವಿರುದ್ಧವಾಗಿಯೇ ಇರುವ ಪರಿಸರವಾದಿಗಳು ಪ್ರಾಮಾಣಿಕತೆಯಿಂದ ಆರಂಭಿಸಿದ ಹೋರಾಟವನ್ನು ಎರಡೂ ರಾಜಕೀಯ ಪಕ್ಷಗಳು ತಮ್ಮ ಲಾಭಾಕ್ಕಾಗಿ ಕಾಲ ಕಾಲಕ್ಕೆ ಬೇಕಾದಂತೆ ದುರುಪಯೋಗಪಡಿಸಿಕೊಂಡರು.

ಬಿಜೆಪಿಯ ಇಬ್ಬರು ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಇದ್ದಾಗ ಎತ್ತಿನಹೊಳೆಯ ಯೋಜನೆಯ ಪರವಾಗಿ ನಿರ್ಣಯಗಳನ್ನು ಕೈಗೊಂಡು ಅನುದಾನ ಬಿಡುಗಡೆ ಮಾಡಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೇ ಪಕ್ಷದ ಮುಖಂಡರು ಯೋಜನೆಯನ್ನು ವಿರೋಧಿಸಿ ರಥಯಾತ್ರೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೇ ಕಾಂಗ್ರೆಸ್.

ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳೇ ಸುಬ್ರಮ್ಮಣ್ಯದಿಂದ ತೊಡಗಿ ಕಟೀಲಿನಲ್ಲಿ ಕೊನೆಗೊಳ್ಳುವ ರಥಯಾತ್ರೆಯ ಉಸ್ತುವಾರಿ ವಹಿಸಿಕೊಂಡು, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವ ವಹಿಸಿಕೊಂಡಿರುವ ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರು ತಾವು ಹಿಂದೆ ಮಾಡಿರುವ ಪ್ರಮಾದಕ್ಕಾಗಿ ಭಾಗವಹಿಸುತ್ತಿದ್ದಾರೆ ಎನ್ನಬಹುದು.