ಸಾಧನೆಗಳನ್ನು ಮನೆಮನೆಗೆ ಮುಟ್ಟಿಸಲು ಸೆಪ್ಟೆಂಬರ್ 23ಕ್ಕೆ ಕಾಂಗ್ರೆಸ್ ಅಭಿಯಾನ

ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ ಪರಮೇಶ್ವರ್ ನಿರ್ದೇಶನದ ಮೇರೆಗೆ ರಾಜ್ಯದಾದ್ಯಂತ ಆರಂಭಗೊಳ್ಳಲಿರುವ `ಮನೆ ಮನೆಗೆ ಕಾಂಗ್ರೆಸ್ ಅಭಿಯಾನ’ ಸೆಪ್ಟೆಂಬರ್ 23ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆರಂಭಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶಕುಮಾರ್ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕ ಜೆ ಆರ್ ಲೋಬೊ ಕ್ಷೇತ್ರದಿಂದಲೇ ಈ ಕಾರ್ಯಕ್ರಮ ಆರಂಭಗೊಳ್ಳಲಿದೆ. ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ವಿಷ್ಣುನಾಥ್ ಆಗಮಿಸಿ ಅಭಿಯಾನ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಯು ಟಿ ಖಾದರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಸರಕಾರದ ನಾಲ್ಕು ವರ್ಷದ ಸಾಧನೆಗಳ ಕೈಪಿಡಿಯನ್ನು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಲಿದ್ದಾರೆ. ಜಿಲ್ಲೆಯ ಎಲ್ಲಾ ಬ್ಲಾಕಿನ ಒಂದೊಂದು ಬೂತುಗಳಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದು ವಿವರಿಸಿದರು.

ಇಲೆಕ್ಟ್ರಾನಿಕ್ ಮತಯಂತ್ರ ನಿಷೇಧಿಸಬೇಕು. ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ಆಗ್ರಹವಾಗಿದ್ದು, ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿ ಹೇಳಿದರು. ಇಂತಹ ಮತಯಂತ್ರಗಳಿಂದ ಚುನಾವಣೆಯಲ್ಲಿ ನಕಲಿ ಮತದಾನವಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಹಿಂದಿನ ವ್ಯವಸ್ಥೆಯಂತೆ ಬ್ಯಾಲೆಟ್ ಪೇಪರ್ ಮೂಲಕ ಈ ಬಾರಿಯೂ ಚುನಾವಣೆಗಳು ನಡೆಯಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದ್ದು, ಮುಖ್ಯಮಂತ್ರಿಗಳು ಕೂಡಾ ಇದನ್ನು ಮಾಡಲು ಒತ್ತಡ ಹೇರಲಿದ್ದಾರೆ ಎಂದರು.

2018ರ ವಿಧಾನ ಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ 8ರಲ್ಲಿ 7 ಸ್ಥಾನ ನಾವು ಗೆದ್ದಿದ್ದು, ಒಂದು ಸ್ಥಾನವನ್ನು ಸೋತಿದ್ದೆವು. ಮುಂದಿನ ಚುನಾವಣೆಯಲ್ಲಿ 8ರಲ್ಲಿ 8 ಸ್ಥಾನಗಳನ್ನೂ ನಾವು ಗೆಲ್ಲುವುದು ಖಚಿತ ಎಂದರು.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ ಜೆ ಜಾರ್ಜ್ ಅವರ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದೆ. ರಾಜ್ಯ ಸರಕಾರ ನಡೆಸಿದ ತನಿಖೆಯಲ್ಲಿ ಕೊಟ್ಟ ವರದಿಯನ್ನು ನ್ಯಾಯಾಲಯ ಈ ಹಿಂದೆ ಸ್ವೀಕರಿಸಿದ್ದು, ಗಣಪತಿ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಹೇಳಿದೆ. ಇದೀಗ ಪ್ರಕರಣ ಸಿಬಿಐ ವಶದಲ್ಲಿ ಇರುವುದರಿಂದ ಅದುವರೆಗೆ ಕಾಯೋಣ. ಜಾರ್ಜ್ ರಾಜೀನಾಮೆ ಈಗ ಅನಗತ್ಯ ಎಂದರು.