ಸರಕಾರಗಳ ದುರಾಡಳಿತ ಖಂಡಿಸಿ ಕಾಂಗ್ರೆಸ್ ಧರಣಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮತ್ತು ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರ ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ನಿತ್ಯ ನರಕಯಾತನೆ ನೀಡುತ್ತಿದೆ” ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಕೀಂ ಕುನ್ನಿಲ್ ಆರೋಪಿಸಿದರು.

“60 ತಿಂಗಳಲ್ಲಿ ದೇಶದ ಸಂಪೂರ್ಣ ಮುಖವಾಡವನ್ನು ಬದಲಾಯಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೇರಿದ ನರೇಂದ್ರ ಮೋದಿಯವರು ಬದಲಾವಣೆ ತರುವ ಬದಲು ಯುಪಿಎ ಸರಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸುತ್ತಿವೆ, ಇಲ್ಲವೇ ಹೆಸರು ಬದಲಾಯಿಸಿ ಅದೇ ರೀತಿ ಮುನ್ನಡೆಯುತ್ತಿದೆ. ದೇಶ ಇದುವರೆಗೂ ಕಾಯ್ದುಕೊಂಡು ಬಂದ ಸಕಲ ರಾಜಕೀಯ ಸದಾಚಾರಗಳನ್ನು ಗಾಳಿಗೆ ತೂರಿ ಅನಾಗರಿಕ ರೀತಿಯ ಆಡಳಿತವನ್ನು ನಡೆಸುತ್ತಿರುವ ಕೇಂದ್ರ ಸರಕಾರವು ಆಡಳಿತ ಕಾಲಾವಧಿಯ ಕೊನೆಯಲ್ಲಿ ಭಾವಾನಾತ್ಮಕ ವಿಷಯಗಳನ್ನು ಕೆದಕಿ ಮತ್ತೊಮ್ಮೆ ಅಧಿಕಾರಕ್ಕೇರುವ ತಿರುಕನ ಕನಸು ಕಾಣುತ್ತಿದೆ. ಕಾಂಗ್ರೆಸ್ ಇಷ್ಟು ವರ್ಷಗಳ ಆಡಳಿತಾವಧಿಯಲ್ಲಿ  ಏನು ಮಾಡಿದೆಯೆಂದು ಪ್ರಶ್ನಿಸುತ್ತಿರುವ ಮೋದಿ ಭಕ್ತರು ಅನುಭವಿಸುತ್ತಿರುವ ಸಕಲ ಸೌಕರ್ಯಗಳೂ ಕಾಂಗ್ರೆಸ್ ಆಡಳಿತದ ಕೊಡುಗೆ ಎಂಬುದನ್ನು ಮರೆತಿದ್ದಾರೆ. ಯಾವ ಹೊಸ ಕಾರ್ಯಕ್ರಮಗಳಿಗೂ ಕನಿಷ್ಠ ಶಂಕುಸ್ಥಾಪನೆ ಮಾಡಲು ಕೂಡಾ ಸಾಧ್ಯವಾಗದ ಮೋದಿಯವರು ಯುಪಿಎ ಕಾಲಾವಧಿಯ ಯೋಜನೆಗಳನ್ನು ಉದ್ಘಾಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ” ಎಂದು ಹಕೀಂ ಕುನ್ನಿಲ್ ಹೇಳಿದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನದ್ರೋಹ ನೀತಿ ಖಂಡಿಸಿ ವರ್ಕಾಡಿ ಮಜೀರ್ ಪಳ್ಳದಲ್ಲಿ ಜರುಗಿದ ಧರಣಿಯಲ್ಲಿ ಅವರು ಮಾತನಾಡಿದರು.