ಪಡಿತರ ಅವ್ಯವಸ್ಥೆಗೆ ಎಡರಂಗ ಸರಕಾರ ಕಾರಣ : ಕಾಂಗ್ರೆಸ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ರಾಜ್ಯದ ಜನ ಸಾಮಾನ್ಯರ ಕನಿಷ್ಠ ಅಗತ್ಯ ಪೂರೈಕೆಯಲ್ಲಿ ಎಡರಂಗ ಸರಕಾರ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಳೆದಿದ್ದು, ಆಡಳಿತ ನಡೆಸಲು ಯೋಗ್ಯವಲ್ಲ. ರಾಜ್ಯದ ಜನತೆಯ ಒಂದು ಹೊತ್ತಿನ ಊಟಕ್ಕೂ ಕಲ್ಲು ಹಾಕಿರುವ ಎಡರಂಗ ಪಡಿತರ ವ್ಯವಸ್ಥೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲು ಟೀಕಿಸಿದರು.

ರಾಜ್ಯ ಸರಕಾರದ ಪಡಿತರ ಅವ್ಯವಸ್ಥೆಯನ್ನು ಖಂಡಿಸಿ ಬುಧವಾರ ಕುಂಬಳೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಹಮ್ಮಿಕೊಂಡ ರ್ಯಾಲಿ ಮತ್ತು ಪಡಿತರ ಅಂಗಡಿಗೆ ಮುತ್ತಿಗೆ ಪ್ರತಿಭಟನೆ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಗೆ ಮೊದಲು ಜನ ಮರುಳುಗೊಳಿಸುವ ಘೋಷಣೆಗಳ ಮೂಲಕ ಅಧಿಕ್ಕಾರಕ್ಕೇರಿದ ಎಡ ಸರಕಾರ ಅಧಿಕಾರಕ್ಕೇರಿದ ಬಳಿಕ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಜೊತೆಗೆ ಹಿಂದಿನ ಸರಕಾರದ ವ್ಯವಸ್ಥಿತ ಯೋಜನೆಗಳನ್ನು ನಿರ್ಲಕ್ಷ್ಯಸಿ ಜನ ಸಾಮಾನ್ಯರಿಗೆ ತೊಂದರೆಯಾಗುವಂತ ವಾತಾವರಣ ನಿರ್ಮಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅನ್ಯಾಯವಾಗಿದೆ. ಅಧಿಕಾರಕ್ಕೇರಿ ಈವರೆಗೂ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸದೆ ಹಿಂದಿನ ಸರಕಾರವನ್ನು ವಿಮರ್ಶಿಸುವುದರಲ್ಲಿ ಕಾಲ ತಳ್ಳುತ್ತಿರುವುದು ಸರಕಾರ ನಡೆಸುವ ಪಕ್ಷದ ಹುಳುಕುತನವನ್ನು ಎತ್ತಿ ತೋರಿಸುತ್ತಿದೆ ಎಂದು ತಿಳಿಸಿದ ಅವರು, ಜನಸಾಮಾನ್ಯರ ಕಣ್ಣೀರು ನ್ನು ಕಾಣದಂತೆ ನಟಿಸುವ ಸರಕಾರ ಬಡವರ ಹೆಸರಲ್ಲಿ ಆಡಳಿತ ನಡೆಸುವ ಅಣಕವಾಡುತ್ತಿದೆಯೆಂದು ಖೇದ ವ್ಯಕ್ತಪಡಿಸಿದರು. ನೇತಾರರ ಸಹಿತ ಹಲವಾರು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.