ಸಿ ಕೆ ನಾಯ್ಡು ಪ್ರಶಸ್ತಿ ಪುರಸ್ಕøತೆ ಶಾಂತಾ ರಂಗಸ್ವಾಮಿಗೆ `ಕಂಗ್ರಾಟ್ಸ್’

 

ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ
………………………
ಎಂಭತ್ತರ ದಶಕದಲ್ಲಿ ಮಹಿಳಾ ಕ್ರಿಕೆಟಿನಲ್ಲಿ ಸಾಕಷ್ಟು ಪ್ರಜ್ವಲಿಸಿ ಪುರುಷ ಕ್ರಿಕೆಟಿಗರಿಗಿಂತ ಒಂದು ಕೈ ಮೇಲು ಎನಿಸಿಕೊಂಡವರು ಶಾಂತಾ ರಂಗಸ್ವಾಮಿ. ಮದ್ರಾಸಿನಲ್ಲಿ ಜನಿಸಿದ ಇವರು ಕ್ರಿಕೆಟಿನಲ್ಲಿ ಗುರುತಿಸಿಕೊಂಡಿರುವುದು ಕರ್ನಾಟಕದಲ್ಲಿ. ಅಪೂರ್ವ ಕ್ರೀಡಾ ಸಾಧನೆಯ ಮೂಲಕ ತನ್ನ ಕ್ರೀಡಾ ಬದುಕನ್ನು ರೂಪಿಸಿರುವ ಇವರು ಭಾರತೀಯ ಮಹಿಳಾ ಕ್ರಿಕೆಟ್ `ಲೆಜೆಂಡ್’. ಸದ್ಯ ಮಾಜಿ ಕ್ರಿಕೆಟ್ ಆಟಗಾರ್ತಿಯಾಗಿರುವ ಶಾಂತಾ ರಂಗಸ್ವಾಮಿಗೆ ಈ ಬಾರಿ ಪ್ರತಿಷ್ಠಿತ `ಕೆ ನಾಯ್ಡು ಪ್ರಶಸ್ತಿ’ ಜೀವಮಾನದ ಸಾಧನೆಗೆ ದೊರೆತಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದೇಶದೆಲ್ಲೆಡೆ ನಡೆಯುತ್ತಿರುವಾಗ ಶಾಂತಾ ರಂಗಸ್ವಾಮಿ ಸಿ ಕೆ ನಾಯ್ಡು ಪ್ರಶಸ್ತಿಯಿಂದ ಪುರಸ್ಕøತರಾದರು. ಬಹುಶಃ ಇದೊಂದು ಅಪೂರ್ವ ಸನ್ನಿವೇಶ. ಬಿಸಿಸಿಐ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕಳೆದ ಎರಡು ದಶಕಗಳಿಂದ ನೀಡುತ್ತಿದೆ. ಆದರೆ, ಮಹಿಳಾ ಕ್ರಿಕೆಟ್ ಆಟಗಾರ್ತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವುದು ಇದೇ ಮೊದಲ ಸಲ.
ಭಾರತೀಯ ಕ್ರಿಕೆಟ್ ರಂಗದಲ್ಲಿ ಮೊದಲ ನಾಯಕರಾಗಿ ಮಿನುಗಿದ ಸಿ ಕೆ ನಾಯ್ದು ಹೆಸರಿನಲ್ಲಿ ನೀಡುವ ಈ ಪ್ರಶಸ್ತಿಗೆ ಶಾಂತಾ ರಂಗಸ್ವಾಮಿಯವರನ್ನು ಆಯ್ಕೆ ಮಾಡಿರುವುದು ಒಂದು ಅರ್ಹ ನಿರ್ಧಾರ. ತನ್ನ ಕ್ರಿಕೆಟ್ ಬಾಳ್ವೆಯಲ್ಲಿ 22 ವರ್ಷ ಕ್ರಿಕೆಟ್ ಆಡಿರುವ ಇವರು 16 ವರ್ಷಗಳ ಕಾಲ ಭಾರತೀಯ ಮಹಿಳಾ ತಂಡದಲ್ಲಿ ಆಡಿದ್ದಾರೆ. ಹತ್ತು ವರ್ಷ ಭಾರತ ತಂಡದ ನಾಯಕಿಯಾಗಿ ಜವಾಬ್ದಾರಿ ನಿಭಾಯಿಸಿರುವ ಶಾಂತಾ ಅದ್ಭುತ ಆಟಗಾರ್ತಿ.
ಮೂಲತಃ ಮದ್ರಾಸಿನವರಾದ ಶಾಂತಾ ರಂಗಸ್ವಾಮಿ ಮೊದಲಿಗೆ ಕರ್ನಾಟಕ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು. 1954ರ ಜನವರಿ 1ರಂದು ಜನಿಸಿದ ಇವರು ಸಿ ವಿ ರಂಗಸ್ವಾಮಿ ಹಾಗೂ ರಾಜಲಕ್ಷ್ಮೀ ದಂಪತಿಯ ಸುಪುತ್ರಿ. 1976ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡುವುದರ ಮೂಲಕ ಇವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆಗೈದಿದ್ದರು. ಪದಾರ್ಪಣೆಯ ವರ್ಷದಲ್ಲೇ ಅತ್ಯುತ್ತಮ ಆಟಗಾರ್ತಿಯಾಗಿ ಶಾಂತಾ ರಂಗಸ್ವಾಮಿ ಗುರುತಿಸಿಕೊಂಡಿದ್ದರು.
ಮಹಿಳಾ ಕ್ರಿಕೆಟಿಗೆ 80 ದಶಕದಲ್ಲಿ ಅಷ್ಟೇನೂ ಪ್ರಾಶಸ್ತ್ಯ ಇಲ್ಲದ ಆ ಕಾಲದಲ್ಲೂ ಶಾಂತಾ ರಂಗಸ್ವಾಮಿ ತಮ್ಮ ಗಮನಾರ್ಹ ಆಟದಿಂದ ಸುದ್ದಿಯಲ್ಲಿದ್ದರು. ಹಲವು ಪ್ರಥಮ ಸಾಧನೆಗಳೊಂದಿಗೆ ಗುರುತಿಸಿಕೊಂಡ ಇವರು ವಿದೇಶಿ ನೆಲದಲ್ಲಿ ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿ. ಶಾಂತಾರವರು 1977ರಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಶತಕ (108 ರನ್) ಬಾರಿಸಿ ಮಿಂಚಿದರು.
ಶಾಂತಾ ರಂಗಸ್ವಾಮಿ 1976ರಿಂದ 1991ರ ಅವಧಿಗೆ ಭಾರತ ತಂಡವನ್ನು ಪ್ರತಿನಿಧಿಸಿ 16 ಟೆಸ್ಟ್ ಪಂದ್ಯಗಳನ್ನು ಹಾಗೂ 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಬಲಗೈ ಆಟಗಾರರಾಗಿರುವ ಇವರು ಅತ್ಯುತ್ತಮ ಇನ್ ಸ್ವಿಂಗ್ ಬೌಲರ್. ಬ್ಯಾಟಿಂಗ್ ಹಾಗೂ ಬೌಲಿಂಗಿನಲ್ಲಿ ಮಿಂಚಿದ ಇವರು ಟೆಸ್ಟ್ ಕ್ರಿಕೆಟಿನಲ್ಲಿ 750 ರನ್ ಹಾಗೂ 21 ವಿಕೆಟುಗಳನ್ನು ಪಡೆದಿರುವರು. 12 ಟೆಸ್ಟ್ ಪಂದ್ಯಗಳಲ್ಲಿ ಭಾರತ ಮಹಿಳಾ ತಂಡವನ್ನು ಮುನ್ನಡೆಸಿ ಯಶಸ್ಸನ್ನು ಇವರು ಕಂಡಿದ್ದಾರೆ. ಶಾಂತಾ ಅವರ ಕ್ರಿಕೆಟ್ ಸಾಧನೆಯ ಬಗ್ಗೆ ಅಪಾರ ಪ್ರಶಂಸಾ ಮಾತುಗಳು 80ರ zಶಕದಲ್ಲಿ ಕೇಳಿ ಬಂದಿದ್ದವು. 80ರ ದಶಕದಲ್ಲಿ ಪುರುಷ ಕ್ರಿಕೆಟಿಗರು ಕಳಪೆ ಪ್ರದರ್ಶನ ನೀಡಿದಾಗಲೆಲ್ಲ ಒಂದು ಕೂಗು ಕೇಳಿ ಬಂದಿದ್ದವು. ಅದೆನೆಂದರೆ, ಕಳಪೆ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ತಂಡದಿಂದ ಕೈಬಿಟ್ಟು ಶಾಂತಾ ರಂಗಸ್ವಾಮಿಯವರನ್ನು ಪುರುಷ ತಂಡದಲ್ಲಿ ಆಡಿಸಿ, ಆಗಲಾದರೂ ಭಾರತಕ್ಕೆ ಜಯ ಒಲಿಯಬಹುದು ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದರಂತೆ. ಅಂದು ಶಾಂತಾ ಅಷ್ಟು ಜನಪ್ರಿಯ ಆಟಗಾರ್ತಿ ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ.
ಇವರು ಕ್ರಿಕೆಟಿಗೆ ವಿದಾಯ ಹೇಳಿದ ನಂತರ ಭವಿಷ್ಯದ ಕ್ರಿಕೆಟ್ ಆಟಗಾರ್ತಿಯರನ್ನು ರೂಪಿಸುವ ಕಾಯಕ ಕೈಗೊಂಡರು. ಇವರ ಗರಡಿಯಲ್ಲಿ ಪಳಗಿದ ಹಲವರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ಯಶಸ್ಸನ್ನು ಕಂಡಿರುವರು. ಮಹಿಳಾ ಕ್ರಿಕೆಟ್ ಬಗ್ಗೆ ಅಪಾರ ಒಲವಿರಿಸಿಕೊಂಡಿರುವ ಶಾಂತಾ ಪುರುಷರಂತೆ ಮಹಿಳಾ ಕ್ರಿಕೆಟಿಗೂ ಹೆಚ್ಚು ಪ್ರೋತ್ಸಾಹ ದೊರೆಯಬೇಕು ಎನ್ನುವ ವಾದವನ್ನು ಮಂಡಿಸುತ್ತಾ ಬಂದಿದ್ದಾರೆ. ಮಹಿಳಾ ಕ್ರಿಕೆಟ್ ತಾಂತ್ರಿಕವಾಗಿ ಆಟದಲ್ಲಿ ಸುಧಾರಣೆಯಾಗಬೇಕು. ಹೆಚ್ಚೆಚ್ಚು ಟೆಸ್ಟ್ ಪಂದ್ಯಗಳನ್ನು ಮಹಿಳಾ ಕ್ರಿಕೆಟ್ ತಂಡ ಆಡಬೇಕು. ಕೇವಲ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟಿನತ್ತ ಆಸಕ್ತಿ ಇದ್ದರೆ ಸಾಲದು ಎನ್ನುವುದು ಅವರ ವಾದವಾಗಿದೆ. ಮಹಿಳಾ ಆಟಗಾರ್ತಿಯರಿಗೆ ಪಂದ್ಯದ ಸಂಭಾವನೆ ಹೆಚ್ಚಳದ ವಿಚಾರದಲ್ಲೂ ಇವರು ಧ್ವನಿ ಎತ್ತಿದ್ದಾರೆ.
ಜಾಗತಿಕ ಕ್ರೀಡಾರಂಗದಲ್ಲಿ ಪುರುಷ ಪ್ರಧಾನವಾಗಿರುವ ಕ್ರಿಕೆಟಿನಲ್ಲಿ ಭಾರತೀಯ ಮಹಿಳೆ ಕೂಡಾ ಸಾಧನೆಯ ಹಾದಿಯಲ್ಲಿ `ಕ್ರಿಕೆಟ್ ದಿಗ್ಗಿಜೆ’ಯಾಗಿ ಮೆರೆಯಬಹುದು ಎನ್ನುವುದನ್ನು ಶಾಂತಾ ರಂಗಸ್ವಾಮಿ ತೋರಿಸಿಕೊಟ್ಟಿದ್ದಾರೆ.
ಕ್ರಿಕೆಟಿನಲ್ಲಿ ನಾವು ಕೂಡಾ ಪುರುಷರಿಗಿಂತ ಕಡಿಮೆಯೇನೂ ಇಲ್ಲ ಎನ್ನುವುದನ್ನು ಪ್ರಚುರಪಡಿಸಿರುವ ಇವರಿಗೆ ಪ್ರತಿಷ್ಠಿತ ಸಿ ಕೆ ನಾಯ್ಡು ಪ್ರಶಸ್ತಿ ದೊರೆತಿರುವುದು ಅಭಿಮಾನದ ವಿಚಾರ. 63 ವರ್ಷದ ಶಾಂತಾ ರಂಗಸ್ವಾಮಿ ಸದ್ಯ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥೆ. 1976ರಲ್ಲಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಬಳಿಕ ಶಾಂತಾರಿಗೆ ದೊರೆತ ಸಿ ಕೆ ನಾಯ್ಡು ಪ್ರಶಸ್ತಿ ಇಡೀ ಮಹಿಳಾ ಕ್ರಿಕೆಟಿಗೆ ಸಂದ ಗೌರವವಾಗಿದೆ. ಈ ಸಂದರ್ಭದಲ್ಲಿ ಶಾಂತಾ ರಂಗಸ್ವಾಮಿಗೆ `ಕಂಗ್ರಾಟ್ಸ್’ ಹೇಳೋಣ