ಇಕ್ಕಟ್ಟಿನಲ್ಲಿ ಮುಲ್ಕಿ ಮೆಸ್ಕಾಂ ಬಿಲ್ ಕೌಂಟರ್

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಾರ್ನಾಡಿನ ಖಾನ್ ಪ್ಲಾಜಾ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭವಾದ ಮೆಸ್ಕಾಂ ಬಿಲ್ಲು ಕಟ್ಟುವ ಕೌಂಟರ್ ತೀರಾ ಇಕ್ಕಟ್ಟಿನಿಂದ ಕೂಡಿದ್ದು, ಗ್ರಾಹಕರು ಬವಣೆಪಡುವಂತಾಗಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಲ್ಕ್ಕಿ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಈ ಹಿಂದೆ ಬಿಲ್ಲು ಕೌಂಟರ್ ಇದ್ದು ಅವ್ಯವಸ್ಥೆಗಳ ಆಗರವಾಗಿದ್ದರಿಂದ ಕಾರ್ನಾಡಿನ ಖಾನ್ ಪ್ಲಾಜಾ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಈಗ ಖಾನ್ ಪ್ಲಾಜಾ ಕಟ್ಟಡದಲ್ಲಿ ಮಾಳಿಗೆ ಮೇಲೆ ಬಿಲ್ಲು ಕೌಂಟರ್ ಇದ್ದು ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗೆ ತೀವ್ರ ತೊಂದರೆಯಾಗಿದೆ ಎಂದು ಸಮಾಜಸೇವಕ ಸಾಧುಅಂಚನ್ ಮಟ್ಟು ಆರೋಪಿಸಿದ್ದಾರೆ.

ವಯೋವೃದ್ಧರಿಗೆ ಮಾಳಿಗೆ ಮೆಟ್ಟಿಲು ಏರಲು ತೀವ್ರ ತೊಂದರೆಯಾಗುತ್ತಿದ್ದು, ಕತ್ತಲೆ ಆವರಿಸಿರುವುದರಿಂದ ಗುಹೆಯೊಳಗೆ ಹೋದ ಅನುಭವವಾಗುತ್ತಿದೆ. ಬಿಲ್ಲು ಕಟ್ಟಲು ಬಿಸಿಲು ಮಳೆಯಲ್ಲಿ ನಿಲ್ಲಬೇಕಾಗಿದ್ದು ಮಾರುದ್ದ ಸರತಿ ಬಂದರೆ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಬದಿಯಲ್ಲಿ ನಿಲ್ಲಬೇಕಾಗಿದೆ. ವಾಹನ ದಟ್ಟಣೆಯಿಂದ ಕೂಡಿದ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಅಪಘಾತ ನಡೆಯುತ್ತಿದ್ದು, ಬಿಲ್ಲು ಕಟ್ಟುವವರು ಅಪಾಯ ಎದುರಿಸಬೇಕಾಗಿದೆ.