`ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ಖಂಡಿತವಾಗಿಯೂ ಪುಟಿದೇಳುವುದು’

“ಕಾಂಗ್ರೆಸ್ ಈ ದೇಶದಲ್ಲಿ 120 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದಿದೆ. ಪ್ರತಿಯೊಂದು ಗ್ರಾಮದಲ್ಲೂ ಅದಕ್ಕೆ ಸದಸ್ಯರಿದ್ದಾರೆ”

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ರಾಜ್ಯದ ಅತ್ಯಂತ ಪ್ರಭಾವಿ ರಾಜಕಾರಣಿಯೂ ಹೌದು. ಅವರು ತಮ್ಮ ಸರಕಾರದ ಮುಂದಿರುವ ಸವಾಲುಗಳು, ಕಾಂಗ್ರೆಸ್ ಪಕ್ಷದ ಭವಿಷ್ಯ ಹಾಗೂ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.

  • ಒಂದು ದಶಕದ ನಂತರ ನೀವು ಮತ್ತೆ ಮುಖ್ಯಮಂತ್ರಿ ಗದ್ದುಗೆಗೇರಿದ್ದೀರಿ. ಹೇಗನಿಸುತ್ತದೆ ?

2002ರಲ್ಲಿ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ನನಗೆ ಅನುಭವದ ಕೊರತೆಯಿತ್ತು. ಆದರೆ ನಾನೀಗ ಒಬ್ಬ ಅನುಭವೀ ರಾಜಕಾರಣಿ. ಆದುದರಿಂದ ಆಡಳಿತ ನಿರ್ವಹಣೆ ನನಗೆ ಸುಲಲಿತವಾಗಿದೆ. ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವುದು ನಮ್ಮ ಮೊದಲ ಆದ್ಯತೆ.

  • ಕಳೆದ ಬಾರಿ ನಿಮಗೆ ಒಂದು ವಿರೋಧ ಪಕ್ಷವಿದ್ದರೆ ಈ ಬಾರಿ ಎರಡು ವಿರೋಧ ಪಕ್ಷಗಳಿವೆ.

ನನಗೆ ವಿರೋಧವಿಲ್ಲ. ವಿರೋಧ ಪಕ್ಷಗಳಿಗೆ ಹೇಳಲೂ ಏನೂ ಇಲ್ಲ. 10 ವರ್ಷ ಅಕಾಲಿಗಳು ಪಂಜಾಬ್ ರಾಜ್ಯವನ್ನು  ಹೇಳಹೆಸರಿಲ್ಲದಂತೆ ಮಾಡಿದರು. ಆಮ್ ಆದ್ಮಿ ಪಕ್ಷ ಸಂಪೂರ್ಣ ಅನನುಭವಿ ಪಕ್ಷ, ಅವರಿಗೆ ಕೇವಲ ಬೊಬ್ಬೆ ಹೊಡೆಯಲು ಮಾತ್ರ ಗೊತ್ತು. ಸುಖಪಾಲ್ ಖೈರಾ ಮಾತ್ರ ಅವರ ಏಕೈಕ ಅನುಭವಿ ನಾಯಕ.

  • ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ನೀವು ಚುನಾವಣೆ ಸಂದರ್ಭ ಆಶ್ವಾಸನೆ ನೀಡಿದ್ದೀರಿ. ಆದರೆ ಈಗ ನಿಮ್ಮದೇ ಸಚಿವ ರಾಣಾ ಗುರ್ಜಿತ್ ಹಗರಣವೊಂದರಲ್ಲಿ ಸಿಲುಕಿರುವ ಹೊರತಾಗಿಯೂ ಅವರನ್ನು ಕೈಬಿಡಲು ನೀವು ನಿರಾಕರಿಸಿದ್ದೀರಿ.

ನಾನು ರಾಜಕೀಯದಲ್ಲಿ 50 ವರ್ಷಗಿಂತಲೂ ಹೆಚ್ಚು ಸಮಯ ಇದ್ದವನು. ಮಾಧ್ಯಮ ವಿಚಾರಣೆ ನನಗೆ ಸರಿ ಕಾಣದು. ಯಾರು ಯಾವ ನಿಲುವು ಬೇಕಾದರೂ ತಳೆಯಬಹುದು. ಮಾಧ್ಯಮ ವಿಚಾರಣೆಯ ನಂತರ ವಿಪಕ್ಷಗಳು ಬೊಬ್ಬೆ ಹೊಡೆಯಲು ಆರಂಭಿಸುತ್ತವೆ. ಹೀಗಾದರೆ ಸರಕಾರ ನಡೆಸುವುದು ಹೇಗೆ ಸಾಧ್ಯ ? ಆದರೆ ನನಗೆ ಆರೋಪ ಹೊತ್ತ ಸಚಿವರನ್ನು ಕೈಬಿಡಲು ಸಾಧ್ಯವಿಲ್ಲ. ನುರಿತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇನೆ. ವರದಿಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

  • ಹಿಂದಿನ ಸರಕಾರದ ಬೃಹತ್ ಸಾಲವನ್ನು ನೀವು ಬಳುವಳಿಯಾಗಿ ಪಡೆದಿದ್ದೀರಿ. ನಿಮ್ಮ ಚುನಾವಣಾ ಆಶ್ವಾಸನೆ ಈಡೇರಿಸಲು ಕೇಂದ್ರದ ಅನುದಾನ ದೊರೆಯಬಹುದೇ ?

ಚುನಾವಣೆ ಎದುರಿಸುವ ಸಮಯದಲ್ಲಿ ರಾಜ್ಯದ ಸಾಲದ ಮೊತ್ತ ರೂ 1.3 ಲಕ್ಷ ಕೋಟಿಯಷ್ಟಿರಬಹುದೆಂದು ಅಂದಾಜಿಸಿದ್ದೆವು. ಆದರೆ ಈಗ ಹೊರ ತಂದ ಶ್ವೇತ ಪತ್ರದ ಪ್ರಕಾರ ಈ ಸಾಲದ ಮೊತ್ತ ರೂ 2 ಲಕ್ಷ ಕೋಟಿಯ ಹತ್ತಿರ ಹತ್ತಿರ ಇರಬಹುದು.

  • ರೈತರ ಸಾಲ ಮನ್ನಾ ಬೇಡಿಕೆಯ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುವಿರಿ ?

ಒಂದು ಹಂತದ ತನಕ ರೈತರ ಎಲ್ಲಾ ಸಾಲ ಮನ್ನಾಗೊಳಿಸುವ ಉದ್ದೇಶವಿದೆ.

  • ನಿಮ್ಮ ಸರಕಾರದ ಕೆಲ ಯೋಜನೆಗಳ ಬಗ್ಗೆ ಹೇಳಿ.

ಡ್ರಗ್ಸ್ ಸಮಸ್ಯೆ ಪರಿಹಾರಕ್ಕಾಗಿ ವಿಶೇಷ ಕಾರ್ಯ ಪಡೆ ಸ್ಥಾಪಿಸಿದ್ದೇವೆ. ಒಂದು ಗ್ರಾಂ ಹೆರಾಯಿನ್ ಈ ಹಿಂದೆ ರೂ 1500ಕ್ಕೆ ದೊರಕುತ್ತಿದ್ದರೆ ಈಗ ಅದರ ಬೆಲೆ ರೂ 5000 ಆಗಿದೆ. ಡ್ರಗ್ಸ್ ಸಂತ್ರಸ್ತರ ಪುರ್ನವಸತಿ ಕೇಂದ್ರಗಳಲ್ಲಿ ಜನ ತುಂಬುತ್ತಿದ್ದಾರೆ. ನಮ್ಮ ಯೋಜನೆ ತನ್ನ ಕೆಲಸ ಮಾಡುತ್ತಿದೆ ಎಂದು ತಿಳಿಯುತ್ತದೆ.

  • ನೀವು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಪ್ರಧಾನಿ ವಾಜಪೇಯಿ ಅವರೊಡನ ಉತ್ತಮ ಸಂಬಂಧವಿತ್ತು. ಈಗ ಮೋದಿ ಜತೆ ನಿಮ್ಮ ಸಂಬಂಧ ಹೇಗಿದೆ ?

ಕೇಂದ್ರದ ಮಟ್ಟದಲ್ಲಿ ಹೇಳುವುದಾದರೆ ಪ್ರಧಾನಿ, ವಿತ್ತ ಸಚಿವ ಹಾಗೂ ಇತರ ಸಚಿವರು ನಮಗೆ ಸಹಕಾರ ನೀಡಿದ್ದಾರೆ. ರಾಜಕೀಯದಲ್ಲಿ ನಾವು ಬೇರೆ ಬೇರೆಯಾದರೂ ಸರಕಾರಿ ಮಟ್ಟದಲ್ಲಿ ಯಾವುದೇ ಸಮಸ್ಯೆಯಿಲ್ಲ.

  • ಮೋದಿ ಸರಕಾರ ಜಾರಿಗೆ ತಂದಿರುವ ಗೋಹತ್ಯೆ ಸಂಬಂಧಿತ ನಿಯಮಾವಳಿಗಳ ಬಗ್ಗೆ ನಿಮ್ಮ ಅಭಿಪ್ರಾಯ.

ಈ ವಿಚಾರ ವಿವಿಧ ಹೈಕೋರ್ಟುಗಳಲ್ಲಿವೆ. ಈ ಎಲ್ಲಾ ದೂರು ಅರ್ಜಿಗಳು ತೆರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲಿದೆಯೆಂದು ನನಗನಿಸಿದೆ. ಪಂಜಾಬ್ ರಾಜ್ಯ ಗೋಮಾಂಸ ಸೇವಿಸುವ ರಾಜ್ಯವಲ್ಲದೇ ಇರುವುದರಿಂದ ನಮಗೆ ಯಾವುದೇ ಸಮಸ್ಯೆಯಿಲ್ಲ. ವೈಯಕ್ತಿಕವಾಗಿ ಹೇಳುವುದಾದರೆ ಏನನ್ನು ತಿನ್ನಬೇಕು ಎಂದು ನಿರ್ಧರಿಸುವುದು ಜನರ ಹಕ್ಕು.

  • ಇತ್ತೀಚಿಗಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೊಗದಲ್ಲಿ ನಗು ಮೂಡಿಸಿದ ರಾಜ್ಯ ಪಂಜಾಬ್ ಮಾತ್ರ ಆಗಿದೆ. ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಹಿಂದಿನಂತೆ ರಾರಾಜಿಸಬಹುದೇ ?

ಕಾಂಗ್ರೆಸ್ ಈ ದೇಶದಲ್ಲಿ 120 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದಿದೆ. ಪ್ರತಿಯೊಂದು ಗ್ರಾಮದಲ್ಲೂ ಅದಕ್ಕೆ ಸದಸ್ಯರಿದ್ದಾರೆ. ರಾಜಕೀಯದಲ್ಲಿ ಏಳುಬೀಳುಗಳು ಸಹಜ, ಪಕ್ಷ ಖಂಡಿತವಾಗಿಯೂ ಪುಟಿದೇಳುವುದು.