ಬಿಜೆಪಿ ವಿರುದ್ಧ ಡಿಜಿಟಲ್ ಯುದ್ಧಕ್ಕೆ ಕಾಂಗ್ರೆಸ್ `ವಾರ್ ರೂಮ್’ ಸನ್ನದ್ಧ

ಬೆಂಗಳೂರು : ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರದಲ್ಲಿ ಮುಂದುವರಿಯಬೇಕೆಂಬ ಮಹತ್ವಾಕಾಂಕ್ಷೆಯಿಂದ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ತಂತ್ರಗಾರಿಕೆಯನ್ನು ಹೆಣೆಯುವ ಕಾರ್ಯದಲ್ಲಿ ವ್ಯಸ್ತವಾಗಿದ್ದು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ  ಕಾರ್ಪೊರೇಟ್ ಶೈಲಿಯ ವಾರ್ ರೂಮ್ ಒಂದನ್ನು ರಾಜಧಾನಿಯಲ್ಲಿ ಸ್ಥಾಪಿಸಿದೆ.

ಇಲ್ಲಿ 30 ಮಂದಿ ಯುವ ವೃತ್ತಿಪರರು ಬಿಜೆಪಿಗೆ ಸಡ್ಡು ಹೊಡೆಯಲು ಹಾಗೂ ಜನರ ವಿಶ್ವಾಸ ಸಂಪಾದಿಸಲು ಕಾಂಗ್ರೆಸ್ ಪರವಾಗಿ ಡಿಜಿಟಲ್ ಅಭಿಯಾನದ ರೂಪುರೇಷ ಸಿದ್ಧಪಡಿಸುತ್ತಿದ್ದಾರೆ. ನಗರದ ವಸಂತನಗರ  ಪ್ರದೇಶದಲ್ಲಿರುವ ಈ ಕಚೇರಿಯು ಟೀವಿಗಳು, ರೆಕಾರ್ಡರ್, ಲ್ಯಾಪ್ ಟಾಪುಗಳು ಸಹಿತ ಎಲ್ಲಾ ಸೌಲಭ್ಯಗಳನ್ನು ಹೊಂದಿ ಸಕಲ ಸನ್ನದ್ಧವಾಗಿದ್ದು

ರಾಷ್ಟ್ರಮಟ್ಟದಲ್ಲಿ ನಟಿ, ರಾಜಕಾರಣಿ ರಮ್ಯ ಅವರ ನೇತೃತ್ವದಲ್ಲಿ ಸ್ಥಾಪಿಸಲಾದ ಕೇಂದ್ರದ ಮಾದರಿಯಂತೆಯೇ  ಇದ್ದು ಸದ್ಯಕ್ಕೆ ಬಿಜೆಪಿ ವಿರುದ್ಧ ಪೂರ್ಣಪ್ರಮಾಣದ ಸಾಮಾಜಿಕ ಜಾಲತಾಣ ಯುದ್ಧಕ್ಕೆ ಈ ವಾರ್ ರೂಂ ಸಿದ್ಧವಾಗಿದೆ.

`ಬರೀ ಓಳು ಮೋದಿ, ಬರೀ ಸುಳ್ಳು ಯಡ್ಯೂರಪ್ಪ, ಕಾನಸ್ಟಿಟ್ಯೂಶನ್ ನಮ್ಮ ಧರ್ಮ’ ಮುಂತಾದ ಹ್ಯಾಶ್ ಟ್ಯಾಗುಗಳು ಇತ್ತೀಚೆಗೆ ಜನಪ್ರಿಯವಾಗಲು ಈ  ಡಿಜಿಟಲ್ ತಂತ್ರಜ್ಞರೇ ಕಾರಣ. ಇದೀಗ ಈ ತಂಡವು #ಬಿಜೆಪಿಉಗ್ರಅಜೆಂಡಾ ಅಭಿಯಾನವನ್ನು  ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಟಾರ್ಗೆಟ್ ಮಾಡಲು  ಉಪಯೋಗಿಸುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಮಾಜಿಕ ಜಾಲ ತಂಡದ ಜತೆ ಸಮನ್ವಯ ಸಾಧಿಸಿ ಈ 30 ಮಂದಿಯ ತಂಡ ಕಾರ್ಯಾಚರಿಸುತ್ತಿದೆ.

ಕಂಟೆಂಟ್ ರೈಟಿಂಗ್ ಹಾಗೂ ರಾಜಕೀಯ ಅಭಿಯಾನದಲ್ಲಿ ಅನುಭವವಿರುವ ಪೂರ್ಣಕಾಲಿಕ ವೃತ್ತಿಪರರು ಈ ಡಿಜಿಟಲ್ ಯುದ್ಧದ ರೂಪುರೇಷೆಯನ್ನು ಸಿದ್ಧಪಡಿಸುತ್ತಿದ್ದು ಪಕ್ಷ ಅವರಿಗೆ ಸಂಭಾವನೆಯೊದಗಿಸುತ್ತಿದೆ. ರಾಜ್ಯ ಕಾಂಗ್ರೆಸ್ ಡಿಜಿಟಲ್ ತಂಡದ ನೇತೃತ್ವವನ್ನು ಶ್ರೀವತ್ಸ ವೈ ಬಿ ಎಂಬವರು  ವಹಿಸಿದ್ದು ಪಕ್ಷವು ಯಾವುದೇ ಸುಳ್ಳು ಸುದ್ದಿಯನ್ನು ತನ್ನ ಡಿಜಿಟಲ್ ಪ್ರಚಾರಾಭಿಯಾನದಲ್ಲಿ ಬಳಸಿಕೊಳ್ಳುವುದಿಲ್ಲವಾದುದರಿಂದ ಅದು ಜನರ ಹೆಚ್ಚು ವಿಶ್ವಾಸ ಸಂಪಾದಿಸಲಿದೆ ಎಂಬ ಆತ್ಮವಿಶ್ವಾಸ ಅವರದ್ದು.

 

 

LEAVE A REPLY