ರಾಹುಲ್ ಗಾಂಧಿಯನ್ನು ಉದಾರವಾದಿ ಧ್ವನಿಯಾಗಿ ಬಿಂಬಿಸುತ್ತಿರುವ ಕಾಂಗ್ರೆಸ್

ಮಾನವ ಹಕ್ಕುಗಳ ಅತಿಕ್ರಮಣ, ಗೋರಕ್ಷಣೆಯ ನೆಪದಲ್ಲಿ ಹತ್ಯೆ ಮೊದಲಾದ ಪ್ರಕರಣಗಳನ್ನು ವಿದೇಶದಲ್ಲಿ ರಾಹುಲ್ ಮಾತನಾಡುತ್ತಿರುವುದು ಬಿಜೆಪಿಗೆ ಚಿಂತೆಗೀಡು ಮಾಡಿದೆ.

ನವದೆಹಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಅವರ ಹಿಂದಿನ ವಿದೇಶಿ ಪ್ರವಾಸಗಳಂತಲ್ಲದೆ ಸ್ನೇಹಿತರು ಮತ್ತು ಪ್ರಭಾವೀ ಜನರನ್ನು ಭೇಟಿಯಾಗುತ್ತಿದ್ದಾರೆ. ವಿದೇಶಿ ಕಾಂಗ್ರೆಸ್ ವಿಭಾಗದ ಮುಖ್ಯಸ್ಥ ಚಿಕಾಗೋ ಮೂಲದ ಸ್ಯಾಮ್ ಪಿಟ್ರೋಡಾ ಈ ವರ್ಷದ ಜೂನಿನಿಂದಲೇ ಈ ಪ್ರವಾಸದ ತಯಾರಿ ನಡೆಸುತ್ತಿದ್ದರು. ಭಾರತದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ಮತ್ತು ನಂತರದ ಹಿಂಸೆಯ ವಾತಾವರಣದ ಬಗ್ಗೆ ವಿದೇಶಗಳಲ್ಲಿ ಬೆಳೆದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸುವ ಮೂಲಕ ಭಾವೀ ಪ್ರಧಾನಿಯಾಗಿ ರಾಹುಲ್ ಗಾಂಧಿಯವರನ್ನು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಪರಿಚಯಿಸುವುದು ಈ ಮೀಟಿಂಗಿನ ಉದ್ದೇಶವಾಗಿದೆ.

ಪಿತ್ರೋಡಾ ಮಾತ್ರವಲ್ಲದೆ, ಮಾಜಿ ಕೇಂದ್ರ ಸಚಿವರಾದ ಶಶಿ ತರೂರು ಮತ್ತು ಮಿಲಿಂದ್ ಡಿಯೋರಾ ಅವರೂ ರಾಹುಲ್ ಗಾಂಧಿ ಜೊತೆಗಿದ್ದಾರೆ. ವಾಷಿಂಗ್ಟನ್ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಕೂಡ ಭಾಗವಹಿಸಲಿದ್ದಾರೆ. ಜಾಗತಿಕವಾಗಿ ಬೆಳೆಯುತ್ತಿರುವ ಸರ್ವಾಧಿಕಾರಿ ಪ್ರಭುತ್ವದ ನಡುವೆ ರಾಹುಲ್ ಗಾಂಧಿ ಪ್ರಭಾವೀ ಉದಾರವಾದಿ ಧ್ವನಿ ಎಂದು ಮುಂದಿಡಲು ಕಾಂಗ್ರೆಸ್ ಈ ಪ್ರವಾಸದ ಮೂಲಕ ಪ್ರಯತ್ನಿಸುತ್ತಿದೆ.

“ಜಾಗತಿಕವಾಗಿ ಉದಾರವಾದಿ ಧ್ವನಿಗಳು ಒಂದಾಗುತ್ತಿವೆ. ಸಾಮಾಜಿಕ ಪ್ರಜಾಪ್ರಭುತ್ವವಾದಿಗಳು ಅಥವಾ ಉದಾರವಾದಿ ಶೈಕ್ಷಣಿಕ ಸಂಸ್ಥೆಗಳೇ ಇರಬಹುದು, ಎಲ್ಲರೂ ಬಲಪಂಥೀಯ ಸರ್ವಾಧಿಕಾರಿ ಪಡೆಗಳ ವಿರುದ್ಧ ವಿಚಾರಗಳನ್ನು ಪ್ರಕಟಿಸುತ್ತಿದ್ದಾರೆ. ಅಮೆರಿಕ ಮತ್ತು ಭಾರತ ಅಥವಾ ಟರ್ಕಿಯಲ್ಲಿಯೂ ಈ ವಲಯದ ಚರ್ಚೆಗಳಲ್ಲಿ ಅದೇ ಮಾತುಗಳು ಕೇಳಿಬರುತ್ತಿವೆ. ರಾಹುಲ್ ಅವರ ಬರ್ಕಲೀ ಭಾಷಣದಲ್ಲಿ ಅವರು ಪದೇ ಪದೇ ತಮ್ಮನ್ನು ಉದಾರವಾದಿ ಎಂದು ಹೇಳಿಕೊಂಡಿದ್ದಾರೆ” ಎಂದು ಮನೀಷ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

“ಕಳೆದ ಮೂರು ವರ್ಷಗಳಿಂದ ಭಾರತದಿಂದ ವಿದೇಶಗಳಿಗೆ ಹೋಗುತ್ತಿರುವ ಸುದ್ದಿಗಳು ಒಂದು ಮುಖವನ್ನಷ್ಟೇ ತೋರಿಸುತ್ತಿವೆ. ರಾಹುಲ್ ಭಾರತದ ಉದಾರವಾದಿ ಮುಖ. ಅವರು ಬರ್ಕಲೀಯಲ್ಲಿ ತಮ್ಮ ಚಿಂತನೆಯನ್ನು ಹೊರಗಿಟ್ಟಿರುವುದು ಮಾತ್ರವಲ್ಲದೆ, ಕೆಲವು ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಪ್ರಧಾನಿ ವಿದೇಶಗಳಿಗೆ ಹೋದಾಗ ಎಂದೂ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ” ಎಂದರು ತಿವಾರಿ.

ಆದರೆ ಹಿಮಾಚಲ ಮತ್ತು ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ವಿದೇಶ ಪ್ರವಾಸ ಮಾಡಿರುವುದು ಕಾಂಗ್ರೆಸ್ಸಿನ ಎಲ್ಲರಿಗೂ ಒಪ್ಪಿಗೆಯಾಗಿಲ್ಲ. ಆದರೆ ಬಹುತೇಕರು ರಾಹುಲ್ ವಿದೇಶದಲ್ಲಿ ತಮ್ಮ ವಿಚಾರಗಳನ್ನು ಮುಂದಿಟ್ಟಿರುವುದನ್ನು ಸ್ವಾಗತಿಸಿದ್ದಾರೆ. ಮಾನವ ಹಕ್ಕುಗಳ ಅತಿಕ್ರಮಣ, ಗೋರಕ್ಷಣೆಯ ನೆಪದಲ್ಲಿ ಹತ್ಯೆ ಮೊದಲಾದ ಪ್ರಕರಣಗಳನ್ನು ವಿದೇಶದಲ್ಲಿ ರಾಹುಲ್ ಮಾತನಾಡುತ್ತಿರುವುದು ಬಿಜೆಪಿಗೆ ಚಿಂತೆಗೀಡು ಮಾಡಿದೆ. ಇದೇ ಕಾರಣದಿಂದ ರಾಹುಲ್ ಭಾಷಣ ಮತ್ತು ಪ್ರವಾಸವನ್ನು ಬಿಜೆಪಿಯ ಹಲವು ಸಚಿವರು ಕಟುವಾಗಿ ಟೀಕಿಸುತ್ತಿದ್ದಾರೆ.