ಗೋವು ರಾಷ್ಟ್ರೀಯ ಪ್ರಾಣಿಯಾಗಲಿ, ದೇಶಾದ್ಯಂತ ಗೋಹತ್ಯೆ ನಿಷೇಧಿಸಿ, ಎಂದ ಕಾಂಗ್ರೆಸ್ ಮುಸ್ಲಿಂ ಶಾಸಕ

ಅಹ್ಮದಾಬಾದ್ : ಗೋವನ್ನು ದೇಶದ ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಹಾಗೂ ರಾಜ್ಯದ ಯಾವುದೇ ಕಸಾಯಿಖಾನೆಗಳ ಮಾಲಕರೂ ಗೋಹತ್ಯೆ ನಡೆಸಬಾರದೆಂದು ಹೇಳಿ ಕಾಂಗ್ರೆಸ್ ಶಾಸಕ ಗ್ಯಾಸುದ್ದೀನ್ ಶೇಖ್ ಹಲವರ ಹುಬ್ಬೇರಿಸಿದ್ದಾರೆ.

“ಮುಸ್ಲಿಮರು ಮುಖ್ಯವಾಗಿ ಮಾಂಸ ಮಾರಾಟ ದಂಧೆಯಲ್ಲಿರುವವರು. ರಾಜ್ಯದಲ್ಲಿ ಮತೀಯ ಸೌಹಾರ್ದತೆಯನ್ನು ಕಾಪಾಡಲು ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು” ಎಂದು ಅಹಮದಾಬಾದ್ ನಗರದ ದರಿಯಾಪುರ ಕ್ಷೇತ್ರದ ಶಾಸಕರಾಗಿರುವ ಶೇಖ್ ಹೇಳಿದ್ದಾರೆ. ಗೋಹತ್ಯೆ ಆರೋಪ ಸಾಬೀತಾದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲು ಅನುವು ಮಾಡಿಕೊಡುವ ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯಿದೆಯನ್ನು ಸರಕಾರ ತಿದ್ದುಪಡಿಗೊಳಿಸಿದ ಬಳಿಕ ಶಾಸಕನ ಈ ಹೇಳಿಕೆ ಬಂದಿದೆ.

“ಗೋಹತ್ಯೆ ಮೇಲಿನ ನಿಷೇಧವನ್ನು ನಾನು ಬೆಂಬಲಿಸುತ್ತೇನೆ ಹಾಗೂ ಈ ನಿಷೇಧವನ್ನು ದೇಶಾದ್ಯಂತ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತೇನೆ” ಎಂದು ಹೇಳಿದ ಶೇಖ್, ಅದೇ ಸಮಯ ರಾಜ್ಯದಲ್ಲಿ ಸರಕಾರವು ಬಹಳಷ್ಟು ಗೋಮಾಳ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು. “ಇದರಿಂದಾಗಿ ಗೋವುಗಳು ರಸ್ತೆಗಳಲ್ಲಿ ಅಡ್ಡಾಡುತ್ತಿವೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೇವಿಸುತ್ತಿವೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೆಲ ಸಮಾಜವಿರೋಧಿ ಶಕ್ತಿಗಳು ಪೊಲೀಸರೊಂದಿಗೆ ಶಾಮೀಲಾಗಿ ಅಕ್ರಮ ಗೋಸಾಗಾಟದಲ್ಲಿ ತೊಡಗಿವೆ ಎಂದು ಅವರು ಆರೋಪಿಸಿದರು. ಅದೇ ಸಮಯ ಕಾನೂನುಬದ್ಧವಾಗಿ ಕಸಾಯಿಖಾನೆ ನಡೆಸುವವರಿಗೆ ಕಿರುಕುಳ ನೀಡಬಾರದೆಂದೂ ಅವರು ಆಗ್ರಹಿಸಿದರು.