ಡೀಕೇಶಿ ಭೇಟಿಯಾದ ಕಾಂಗ್ರೆಸ್ ನಾಯಕರು ; ಮುಂದಿನ ನಡೆ ಚರ್ಚೆ

ಬೆಂಗಳೂರು : ಐಟಿ ದಾಳಿಗೊಳಗಾಗಿರುವ ರಾಜ್ಯ ಇಂಧನ ಸಚಿವ ಡೀಕೆ ಶಿವಕುಮಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಅವರು ದ್ವೇಷ ರಾಜಕಾರಣಕ್ಕೆ ಬಲಿಯಾಗಿದ್ದಾರೆಂಬ ಅಂಶವನ್ನು ಮನದಟ್ಟು ಮಾಡಲು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ, ಮೇಯರ್ ಜಿ ಪದ್ಮಾವತಿ ಮತ್ತು ರಾಜ್ಯಸಭಾ ಸದಸ್ಯ ಕೆ ರೆಹಮಾನ್ ಖಾನ್ ರವಿವಾರ ಅವರನ್ನು ಭೇಟಿಯಾಗಿದ್ದಾರೆ.

ಶಿವಕುಮಾರ್ ಜತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿದ ಪರಮೇಶ್ವರ್ ಈ ದಾಳಿಗಳ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿಯನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಪಕ್ಷದ ಎಲ್ಲಾ ನಾಯಕರೂ ಶಿವಕುಮಾರ್ ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಪಕ್ಷದ ಕೇಂದ್ರ ನಾಯಕರುಗಳು ತಿಳಿಸಿದ್ದಾರೆಂದು ಪರಮೇಶ್ವರ್ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಐಟಿ ದಾಳಿಗಳಾಗಿವೆಯೆಂಬ ಒಂದೇ ಕಾರಣಕ್ಕೆ ಪಕ್ಷ ಅವರನ್ನು ಕೈಬಿಡುವುದೆಂದು ತಿಳಿಯುವ ಅಗತ್ಯವಿಲ್ಲ. ಇಂತಹ ಸುದ್ದಿಗಳು ಸತ್ಯಕ್ಕೆ ದೂರ, ಇದೇ ಕಾರಣಕ್ಕೆ ನಾವಿಂದು ಶಿವಕುಮಾರ್ ಅವರನ್ನು ಭೇಟಿಯಾಗಿ ಅವರ ಬೆಂಬಲಕ್ಕೆ ನಾವಿದ್ದೇವೆಂದು ತಿಳಿಸಿದ್ದೇವೆ” ಎಂದು ಪರಮೇಶ್ವರ್ ತಿಳಿಸಿದರು.

ಹಲವಾರು ಇತರ ನಾಯಕರುಗಳಾದ ಅನಿಲ್ ಲಾಡ್, ಆರ್ ವಿ ದೇವರಾಜ್, ರಮೇಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ ಮತ್ತು ಕೆ ಜೆ ಜಾರ್ಜ್ ಕೂಡ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಡಿ ಕೆ ಶಿವಕುಮಾರ್ ಮೇಲೆ ನಡೆದ ಐಟಿ ದಾಳಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಲು ನಿರ್ಧರಿಸಿದೆಯೆಂದು ನಾಯಕರೊಬ್ಬರು ತಿಳಿಸಿದ್ದಾರಲ್ಲದೆ ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು ಐಟಿ ರಿಟನ್ರ್ಸ್ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನಾಂಕವಾಗಿರುವಾಗ ಅದಕ್ಕಿಂತ ಮೊದಲೇ ದಾಳಿ ನಡೆಸಿರುವ ಹಿಂದಿನ ಉದ್ದೇಶವೇನೆಂದು ಸ್ಪಷ್ಟವಾಗಿ ತಿಳಿಯಬಹುದೆಂದು ಅವರು ತಿಳಿಸಿದ್ದಾರೆ.