ಕಾರ್ಕಳ ತಾ ಪಂ ಸಭೆಯಲ್ಲಿ ಬಿಜೆಪಿ -ಕಾಂಗ್ರೆಸ್ ಜಟಾಪಟಿ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರದಿಂದ ಸರಿಯಾದ ಅನುದಾನ ಬರುತ್ತಿಲ್ಲ. ಇದಕ್ಕೆಲ್ಲ ಆಡಳಿತಾರೂಢ ಕಾಂಗ್ರೆಸ್ ಸರಕಾರದ ವೈಫಲ್ಯವೇ ಕಾರಣವೆಂದು ಕಾರ್ಕಳ ತಾ ಪಂ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಆರೋಪಿಸಿದಾಗ ಇದನ್ನು ತಾ ಪಂ ಕಾಂಗ್ರೆಸ್ಸಿನ ಏಕೈಕ ಸದಸ್ಯ ಸುಧಾಕರ್ ಶೆಟ್ಟಿ ಆಕ್ಷೇಪಿಸಿ ಸ್ಥಳೀಯ ಸಮಸ್ಯೆಗಳಿಗೆ “ರಾಜ್ಯ ಸರಕಾರವನ್ನು ದೂರುವುದು ಸರಿಯಲ್ಲ, ಸ್ಥಳೀಯ ಸಮಸ್ಯೆ ಏನಿದ್ದರೂ ಸ್ಥಳೀಯಾಡಳಿತ ಚರ್ಚಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರದಿಂದ ಅನುದಾನ ತರುವಲ್ಲಿ ಶ್ರಮಿಸಬೇಕು” ಎಂದು ಹೇಳಿದರು. ಇದಕ್ಕೆ ಆಡಳಿತ ಪಕ್ಷ ಬಿಜೆಪಿ ಸದಸ್ಯರು ಆಕ್ಷೇಪಿಸಿ ಸರಕಾರ ಸ್ಥಳೀಯಾಡಳಿತದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಇನ್ನೂ ಬಂದಿಲ್ಲ, ಈಗಾಗಲೇ ತರಗತಿಗಳು ಆರಂಭವಾಗಿದ್ದರೂ ಪುಸ್ತಕಗಳ ಪೂರೈಕೆಗೆ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿದರು. ರೇಷನ್ ಕಾರ್ಡ್ ಸಮಸ್ಯೆ ಮುಗಿಯದ ಸಮಸ್ಯೆಯಾಗಿಯೇ ಉಳಿದಿದೆ. ಸರಕಾರ ಈ ಕುರಿತು ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ತಾ ಪಂ ಸದಸ್ಯ ಹರೀಶ್ ನಾಯಕ್ ಆರೋಪಿಸಿದರು. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಮನಮೋಹನ್ ಉತ್ತರಿಸಿ, “ಈಗಾಗಲೇ ಕೆಲವು ಪಠ್ಯಪುಸ್ತಕಗಳು ವಿತರಣೆಯಾಗಿದ್ದು, ಇನ್ನು ಹಲವು ಪುಸ್ತಕಗಳು ಮುದ್ರಣ ಹಂತದಲ್ಲಿರುವುದರಿಂದ ಸ್ವಲ್ಪ ಮಟ್ಟಿನ ವಿಳಂಬವಾಗಿದೆ” ಎಂದು ಸ್ಪಷ್ಟನೆ ನೀಡಿದರು. ಪಡಿತರ ಚೀಟಿಯ ಕುರಿತು ಆಹಾರ ಇಲಾಖೆಯ ಗಣೇಶ್ ಮಾತನಾಡಿ, “ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿದಾರರಿಗೆ ಪಡಿತರ ಚೀಟಿಯನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದರು.

ಎಳ್ಳಾರೆ ಗ್ರಾಮದ ಶೇಡಿಗುರಿ ಎಂಬಲ್ಲಿ ಜೂ 14ರಂದು ಮಧ್ಯರಾತ್ರಿ ಶಿಕಾರಿ ನಡೆಸುತ್ತಿದ್ದವರ ಗುಂಡಿಗೆ ಮರಗಳ್ಳತದ ತಂಡದಲ್ಲಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಮಾಯಕನೊಬ್ಬ ಸಾವನ್ನಪ್ಪಿರುವ ಘಟನೆಯ ಕುರಿತು ತಾ ಪಂ ಸದಸ್ಯೆ ಸುಲತಾ ನಾಯ್ಕ್ ಹಾಗೂ ಹರೀಶ್ ನಾಯ್ಕ್ ಮಾತನಾಡಿ, “ಮುನಿಯಾಲು ಪರಿಸರದಲ್ಲಿ ಪ್ರಭಾವಿ ವ್ಯಕ್ತಿಗಳು ಪ ಪಂಗಡದ ಅಮಾಯಕ ಯುವಕರನ್ನು ಮರಗಳ್ಳತನದಂತಹ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದು, ಇದರ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲು ವಿಫಲವಾಗಿದೆ ಅಲ್ಲದೆ ಈ ಪ್ರಭಾವಿಗಳ ವಿರುದ್ಧ ಈ ಹಿಂದೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದರೂ ಇಲಾಖೆಯಿಂದ ಯಾವುದೇ ರೀತಿಯ ಕ್ರಮವಾಗಿಲ್ಲ, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಗಮನಿಸಿದಾಗ ಇಲಾಖಾಧಿಕಾರಿಗಳೇ ಪ್ರಕರಣದಲ್ಲಿ ಶಾಮೀಲಾಗಿರುವುದು ಸ್ಪಷ್ಟವಾಗಿದೆ” ಎಂದರು. ಈ ಕುರಿತು ಅರಣ್ಯಾಧಿಕಾರಿ ಉತ್ತರಿಸಿ, “ಮರಗಳ್ಳತನ ಪ್ರಕರಣದಲ್ಲಿ ಈಗಾಗಲೇ ಐವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ” ಎಂದು ತಿಳಿಸಿದರು.