ಮುಂದುವರಿದ ತುಂಬೆ ಡ್ಯಾಂ ನೀರು ಏರಿಕೆ ಗೊಂದಲ

ಕೃಷಿ ಜಮೀನು ಎಲ್ಲಿಯವರೆಗೆ ಮುಳುಗಡೆ ಎಂದು ಜಿಲ್ಲಾಡಳಿತಕ್ಕೂ ಸ್ಪಷ್ಟ ಮಾಹಿತಿ ಇಲ್ಲ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತುಂಬೆ ವೆಂಟೆಂಡ್ ಡ್ಯಾಂನಲ್ಲಿ ಎಷ್ಟು ಅಡಿಯವರೆಗೆ ನೀರು ನಿಲ್ಲಿಸಲಾಗುತ್ತದೆ ಎಂಬ ಬಗ್ಗೆ ಇನ್ನೂ ಖಚಿತ ನಿರ್ಧಾರವಿಲ್ಲದಿರುವ ಜಿಲ್ಲಾಡಳಿತ ನಿರ್ಧಾರದಿಂದ ತುಂಬೆ ಡ್ಯಾಂ ಪರಿಸರದ ಸಂತ್ರಸ್ತ ರೈತರು ಕಂಗೆಟ್ಟಿದ್ದಾರೆ. ಹೀಗಾಗಿ ಅತ್ತ ನಾಲ್ಕು ಗ್ರಾಮಗಳ ನದಿತಟದ ರೈತರು ಇನ್ನೂ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಭೀತಿಯನ್ನು ದಿನನಿತ್ಯ ಎದುರಿಸುತ್ತಲೇ ಇದ್ದಾರೆ. ಇವರ ಕೃಷಿ ಜಮೀನು ಎಲ್ಲಿಯವರೆಗೆ ಮುಳುಗಡೆಯಾಗುತ್ತದೆ ಎಂಬ ಬಗ್ಗೆ ಜಿಲ್ಲಾಡಳಿತ ಅಧಿಕಾರಿಗಳಿಗೂ ಸ್ಪಷ್ಟ ಮಾಹಿತಿ ಇಲ್ಲ, ಅವರು ಗೊಂದಲದಲ್ಲಿದ್ದಾರೆ.

ನೂತನ ಡ್ಯಾಂ ನಿರ್ಮಾಣ ಮಾಡಲು ಯೋಜನೆ ರೂಪಿಸಿದ ದಿನದಿಂದ ಇಲ್ಲಿನ ಭೂಮಾಲಕರು, ಕೃಷಿಕರು ತಮ್ಮ ಭೂಮಿ ಕಳೆದುಕೊಳ್ಳುವ ಆತಂಕವನ್ನು ಎದುರಿಸುತ್ತಲೇ ಬಂದಿದ್ದಾರೆ. ಹೊಸ ಡ್ಯಾಂಗಾಗಿ ಕೇವಲ 200 ಎಕರೆ ಭೂಮಿಯನ್ನು ಮಾತ್ರ ವಶಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ಈ ಹಿಂದೆ ಹೇಳಿತ್ತು. ಆದರೆ ಯೋಜನೆಗಾಗಿ ಮತ್ತೆ ಹೆಚ್ಚುವರಿಯಾಗಿ ವಶಪಡಿಸಿಕೊಳ್ಳುವ ಭೂಮಿಯ ಬಗ್ಗೆ ಯಾರಲ್ಲೂ ಮಾಹಿತಿ ಇಲ್ಲ. ಇದೀಗ ಸರಕಾರಿ ಮತ್ತು ಖಾಸಗಿ ಜಮೀನು ಸೇರಿದಂತೆ ಸರಿಸುಮಾರು 371 ಎಕರೆ ಭೂಮಿಯನ್ನು ಯೋಜನೆಗಾಗಿ ಬಳಸಿಕೊಳ್ಳಲಾಗಿದೆ.

“ಈ ಯೋಜನೆಗಾಗಿ ಎಷ್ಟು ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಹೆಚ್ಚಿನ ರೈತರಿಗೆ ಗೊತ್ತೇ ಇಲ್ಲ” ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿರುವ ಶ್ರೀಧರ ಶೆಟ್ಟಿ.

“ಕಳೆದ ಹಲವು ವರ್ಷಗಳಿಂದ ರೈತರ ಪ್ರಶ್ನೆಗಳಿಗೆ ಇನ್ನೂ ಕೂಡಾ ಜಿಲ್ಲಾಡಳಿತ ಸರಿಯಾದ ಉತ್ತರವನ್ನು ನೀಡುವುದಕ್ಕೆ ತಡಕಾಡುತ್ತಿದೆ. ಈ ಹಿಂದೆ ಹಾಕಿದ ಲೆಕ್ಕಾಚಾರದ ಪ್ರಕಾರ ಯೋಜನೆಗಾಗಿ 270 ಎಕರೆ ಜಮೀನು ಬೇಕಾದೀತು ಎಂದು ಹೇಳಲಾಗಿತ್ತು. ಆದರೆ ಇದೀಗ ಅದು 370 ಎಕ್ಕರೆ ಜಮೀನಿಗೆ ತಲುಪಿದೆ. ಸಂತ್ರಸ್ತ ರೈತರಿಗೆ ಪರಿಹಾರ ಧನವನ್ನು ವಿತರಿಸುವ ಮುಂಚೆ ಈ ವಿಚಾರಗಳ ಬಗ್ಗೆ ಜಿಲ್ಲಾಡಳಿತ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕಾಗಿತ್ತು” ಎನ್ನುತ್ತಾರೆ ಶೆಟ್ಟಿ.

ನೂತನ ಡ್ಯಾಂ ನಿರ್ಮಾಣ ನೀರು ಸಂಗ್ರಹದ ಬಳಿಕವೂ ಹಲವು ರೈತರ ಜಮೀನು ನೀರಿನಲ್ಲಿ ಮುಳುಗಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ರೈತ ಮುಖಂಡರಾದ ಮನೋಹರ್ ಶೆಟ್ಟಿ.

ಇನ್ನೊಂದೆಡೆ ದ ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, “ಇತಿಹಾಸದಲ್ಲೇ ಮೊದಲ ಬಾರಿಗೆ ಅಣೆಕಟ್ಟು ನಿರ್ಮಾಣದ ಬಳಿಕ ಭೂಮಿಯನ್ನು ವಶಪಡಿಸಿಕೊಂಡಿರುವ ಉದಾಹರಣೆ ಇದಾಗಿದೆ. ಸಂತ್ರಸ್ತ ರೈತರು ಪರಿಹಾರ ಧನದ ಬಗ್ಗೆ ಚಿಂತಿಸಬೇಕಾಗಿಲ್ಲ. ಅವರಿಗೆಲ್ಲರಿಗೂ ನಾವು ಸೂಕ್ತ ರೀತಿಯ ಪರಿಹಾರವನ್ನು ವಿತರಿಸುತ್ತೇವೆ” ಎನ್ನುತ್ತಿದ್ದಾರೆ.

“ತುಂಬೆ ನೀರಿನ ಸಂಗ್ರಹ ಮಟ್ಟ 7 ಮೀಟರ್ ತಲುಪಿದಲ್ಲಿ ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎನ್ನುತ್ತಾರೆ” ಮಂಗಳೂರು ಮೇಯರ್ ಹರಿನಾಥ್.

ಇನ್ನು ಜಮೀನು ಕಳೆದುಕೊಂಡಿರುವ ಸಂತ್ರಸ್ತ ರೈತರ ಜೊತೆಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಸುಭಾಷ್ಚಂದ್ರ ಕುಂಠಿಯಾ ಶನಿವಾರ ಸಭೆ ಆಯೋಜಿಸಿದ್ದಾರೆ. ಸಂತ್ರಸ್ತ ರೈತರ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿದ್ದಾರೆ.