ರೇಶನ್ ಕಾರ್ಡ್ ವಿತರಣೆ : ಮುಂದುವರಿದ ಗೊಂದಲ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಳೆದ ಕೆಲವು ವರ್ಷಗಳಿಂದ ರೇಶನ್ ಕಾರ್ಡುಗಳಿಗೆ ಕಾತರರಾಗಿದ್ದ ಜನತೆಗೆ ಕೊನೆಗೂ ಮುಕ್ತಿ ಸಿಕ್ಕಿತಾದರೂ ರೇಶನ್ ಕಾರ್ಡ್ ವಿತರಣೆಯಲ್ಲಿ ಹಾಗೂ ಮುದ್ರಣದಲ್ಲಿ ಹಲವು ನ್ಯೂನತೆಗಳು ಕಂಡುಬಂದಿವೆ.

ವರ್ಷಗಳ ಹಿಂದೆಯೇ ಮಾಹಿತಿಯನ್ನು ಪಡೆದು ಹೋಗಿದ್ದ ಅಧಿಕಾರಿಗಳು ಬಳಿಕ ಹಲವು ಕಾರಣಗಳನ್ನು ಮುಂದಿಟ್ಟು ವಿಳಂಬಿಸಿದರು. ಆದರೆ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿರುವ ಹಲವು ರೇಶನ್ ಅಂಗಡಿಗಳ ಫಲಾನುಭವಿಗಳಿಗೆ ರೇಶನ್ ಕಾರ್ಡ್ ಇನ್ನೂ ಸಿಗದಿರುವುದು ಅಧಿಕೃತರ ವೈಪಲ್ಯವನ್ನು ಎತ್ತಿ ತೋರಿಸಿದೆ.

ಮಂಜೇಶ್ವರ ಗ್ರಾ ಪಂ ಹಲವು ವಾರ್ಡುಗಳಲ್ಲಿ ಈಗಾಗಲೇ ರೇಶನ್ ಕಾರ್ಡುಗಳನ್ನು ವಿತರಿಸಲಾಯಿತಾದರೂ ಈ ಬಗ್ಗೆ ಅಧಿಕಾರಿಗಳು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸದೇ ಇದ್ದ ಹಿನ್ನೆಲೆಯಲ್ಲಿ ಮಾಹಿತಿ ಅರಿಯದೆ ಹಲವರು ರೇಶನ್ ಕಾರ್ಡುಗಳನ್ನು ಪಡೆಯಲು ಗೈರಾಗುವುದರ ಜೊತೆಗೆ ಹಲವು ಫಲಾನುಭವಿಗಳಿಗೆ ರೇಶನ್ ಕಾರ್ಡ್ ಬಂದೇ ಇರಲಿಲ್ಲ. ಅದೇ ರೀತಿ ಬಹುತೇಕ ಫಲಾನುಭವಿಗಳ ಕಾರ್ಡುಗಳಲ್ಲಿ ನೀಡಲಾದ ಮನೆ ಮಂದಿ ಸಂಖ್ಯೆ ಕಡಿಮೆ ಮುದ್ರಣಗೊಂಡಿದೆ. ಕೆಲವದರಲ್ಲಿ ಹೆಸರುಗಳ ಮುದ್ರಣವೇ ಬದಲಿಯಾಗಿದೆ. ಇದನ್ನೆಲ್ಲಾ ಸರಿಪಡಿಸಲು ಇನ್ನು ಎಷ್ಟು ಬಾರಿ ಕಚೇರಿ ಮೆಟ್ಟಲುಗಳನ್ನು ಹತ್ತಬೇಕೆಂಬುದು ಫಲಾನುಭವಿಗಳ ಪ್ರಶ್ನೆ.

ಮಂಜೇಶ್ವರ ಗ್ರಾ ಪಂ ಸಮೀಪದಲ್ಲಿರುವ ರೇಶನ್ ಅಂಗಡಿಗಳ ಫಲಾನುಭವಿಗಳ ಬಹುತೇಕ ರೇಶನ್ ಕಾರ್ಡುಗಳ ಹೊರಭಾಗದಲ್ಲಿ ಮನೆ ಯಜಮಾನನ ಹೆಸರು ಒಂದು ಜಾತಿಗೆ ಸೇರಿದ್ದರೆ ಒಳಭಾಗದಲ್ಲಿ ಮನೆ ಮಂದಿಯ ಹೆಸರು ಇನ್ನೊಂದು ಜಾತಿಗೊಳಪಟ್ಟ ಹೆಸರುಗಳಾಗಿವೆ. ಅಧಿಕಾರಿಗಳ ವೈಫಲ್ಯದಿಂದ ಫಲಾನುಭವಿಗಳು ಗೊಂದಲಕ್ಕೀಡಾಗಿದ್ದಾರೆ.