ನೋಟು ಅಮಾನ್ಯ ಅಂಕಿ ಅಂಶಗಳಲ್ಲಿ ಗೊಂದಲ

ಇಷ್ಟು ಪ್ರಮಾಣದ ಹಳೇ ನೋಟುಗಳು ಬ್ಯಾಂಕ್ ತಿಜೋರಿ ಸೇರಿದರೆ ಕೇಂದ್ರ ಸರಕಾರ ಹೇಳಿಕೊಂಡಂತಹ ಕಪ್ಪು ಹಣ ಎಲ್ಲಿ ಹೋಯಿತು ಎಂಬ ಗುಮಾನಿ ಮೂಡುತ್ತದೆ. ಕಪ್ಪು ಹಣದ ಹೆಸರಿನಲ್ಲಿ ನೋಟು ಅಮಾನ್ಯ ಮಾಡಿ ನಗೆಪಾಟಲಿಗೆ ಈಡಾಗುವ ಬದಲು ಕೇಂದ್ರ ಸರಕಾರ ಡಿಜಿಟಲ್ ಇಂಡಿಯಾ, ಕ್ಯಾಶ್ ಲೆಸ್ ವ್ಯವಹಾರದತ್ತ ಜನರ ಗಮನವನ್ನು ಸೆಳೆದಿತ್ತು.

ವಿಶ್ಲೇಷಣೆ

ಸಂಸದೀಯ ಸಮಿತಿ ಮುಂದುಗಡೆ ಸ್ಪಷ್ಟ ಉತ್ತರ ನೀಡಲು ತಡಕಾಡಿದ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಉರ್ಜಿತ್ ಪಟೇಲ್ ಸಹಾಯಕ್ಕೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಬಂದಿರುವ ಸುದ್ದಿಯ ಬೆನ್ನಲ್ಲೇ ನೋಟು ಅಮಾನ್ಯ ಸಂಬಂಧಿಸಿ ಅಂಕಿ ಅಂಶಗಳಲ್ಲಿ ಗೊಂದಲ ಇರುವುದನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಬೊಟ್ಟು ಮಾಡಿವೆ.

ಜನವರಿ 13ರ ತನಕ 9.2  ಲಕ್ಷ ಕೋಟಿ ರೂಪಾಯಿ ಹೊಸ ನೋಟುಗಳನ್ನು ಚಲಾವಣೆಗೆ ಬಿಡಲಾಗಿದೆ ಎಂದು ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಸಂಸದೀಯ ಸಮಿತಿ ಎದುರುಗಡೆ ರಿಸರ್ವ್ ಬ್ಯಾಂಕ್ ಹೇಳಿತ್ತು. ಹಾಗಿದ್ದರೆ, ಜನರು ಅರವತ್ತು ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹಿಂತೆಗದುಕೊಂಡಿದೆ ಎಂದು ಬ್ಲೂಮ್ ಬರ್ಗ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಿಸರ್ವ್ ಬ್ಯಾಂಕ್ ಇದುವರೆಗೆ ನೋಟು ಅಮಾನ್ಯದ ಅಂಕಿ ಅಂಶ ಮತ್ತು ಹೊಸ ನೋಟುಗಳನ್ನು ಬಿಡುಗಡೆ ಮಾಡಿರುವ ಬಗ್ಗೆ ಅಧಿಕೃತ ಪ್ರಕಟಣೆ ನೀಡಿಲ್ಲ.

ಆದರೆ, ಹೊಸ ನೋಟುಗಳ ಬಿಡುಗಡೆ ಮಾಡಿರುವುದು ಮತ್ತು ಜನರು ಪಡೆದುಕೊಂಡಿರುವ ಹಣದ ಅಂಕಿ ಅಂಶಗಳು ಹೋಲಿಕೆ ಆಗದಿರುವುದು ಆರ್ಥಿಕ ತಜ್ಞರನ್ನು ಚಿಂತನೆಗೆ ಹಚ್ಚಿದೆ.

ಮುಂಬರುವ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಸ್ಪಷ್ಟ ಅಂಕಿ ಅಂಶ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ, ಕಳೆದ ಒಂದು ತಿಂಗಳಿನಿಂದ ಆರ್ ಬಿ ಐ ಅಂಕಿ ಅಂಶಗಳ ಬಿಡುಗಡೆ ಮಾಡುತ್ತಿಲ್ಲ. ಸುದ್ದಿ ಸಂಸ್ಥೆಗಳು ಬ್ಯಾಂಕ್ ಬಿಡುಗಡೆ ಮಾಡುವ ಹಣಕಾಸು ಪ್ರಕಟಣೆಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಬಿಸಬೇಕಾಗಿದೆ.

ನವೆಂಬರ್ 8ರಂದು ಐನೂರು ಮತ್ತು ಸಾವಿರ ರೂಪಾಯಿಗಳ 15.4 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಅಮಾನ್ಯ ಮಾಡಿ ಅನಂತರ ಎರಡು ಸಾವಿರ ಮುಖ ಬೆಲೆಯ ಹೊಸ ನೋಟುಗಳನ್ನು, ಕೆಲವು ವಾರದ ಅನಂತರ ಐನೂರು ಮುಖ ಬೆಲೆಯ ನೋಟುಗಳನ್ನು ಜನರ ವಹಿವಾಟಿಗೆ ಬಿಡುಗಡೆ ಮಾಡಲಾಗಿದೆ.

ನವೆಂಬರ್ 9ರಿಂದ ಜನವರಿ 13ರ ತನಕ ರಿಸರ್ವ್ ಬ್ಯಾಂಕ್  ಒಟ್ಟಾರೆ 6.78 ದಶಲಕ್ಷ ಕೋಟಿ ರೂಪಾಯಿ ಚಲಾವಣೆಗೆ ಬಿಟ್ಟಿದ್ದು, ಒಟ್ಟು ಚಲಾವಣೆಯಲ್ಲಿರುವ ಹಣದ ಮೊತ್ತ 9.2  ಲಕ್ಷ ಕೋಟಿ ರೂಪಾಯಿ ಆಗಿರುತ್ತದೆ. ಆದರೆ, ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ 9.7 ಲಕ್ಷ ಕೋಟಿ ರೂಪಾಯಿಯನ್ನು ಸಾರ್ವಜನಿಕರು ಬ್ಯಾಂಕುಗಳಿಂದ ಪಡೆದುಕೊಂಡಿದ್ದು, ಇದು ಚಲಾವಣೆಗೆ ಬಿಟ್ಟಿರುವ ಹಣದಿಂದ  ಅರವತ್ತು ಸಾವಿರ ಕೋಟಿ ಹೆಚ್ಚಾಗಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದು ಆರ್ಥಿಕ ತಜ್ಞರಿಗೆ ಸವಾಲಾಗಿದೆ.

ಅಮಾನ್ಯ ನೋಟುಗಳೆಷ್ಟು?

ಐನೂರು ಮತ್ತು ಸಾವಿರ ರೂಪಾಯಿಗಳ ಅಮಾನ್ಯ ಮಾಡಿದ ನೋಟುಗಳಲ್ಲಿ ಒಟ್ಟು ಎಷ್ಟು ಹಣ ಬ್ಯಾಂಕಿಗೆ ವಾಪಾಸಾಗಿದೆ ಎಂಬ ಬಗ್ಗೆ ಕೂಡ ನಿಖರವಾದ ಅಂಕಿ ಅಂಶವನ್ನು ರಿಸರ್ವ್ ಬ್ಯಾಂಕ್ ನೀಡುತ್ತಿಲ್ಲ. ಸುಮಾರು 15.4 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಅಮಾನ್ಯ ಮಾಡಲಾಗಿತ್ತು. ಸುದ್ದಿ ಸುಂಸ್ಥೆಗಳ ಪ್ರಕಾರ ಶೇಕಡ 97ರಷ್ಟು ಹಳೇ ನೋಟುಗಳು ಬ್ಯಾಂಕಿಗೆ ವಾಪಾಸಗಿದ್ದು, ಕೇವಲ 54,000 ಕೋಟಿ ರೂಪಾಯಿ ಮಾತ್ರ ಬಂದಿಲ್ಲ ಎನ್ನಲಾಗಿದೆ.

ಇಷ್ಟು ಪ್ರಮಾಣದ ಹಳೇ ನೋಟುಗಳು ಬ್ಯಾಂಕ್ ತಿಜೋರಿ ಸೇರಿದರೆ ಕೇಂದ್ರ ಸರಕಾರ ಹೇಳಿಕೊಂಡಂತಹ ಕಪ್ಪು ಹಣ ಎಲ್ಲಿ ಹೋಯಿತು ಎಂಬ ಗುಮಾನಿ ಮೂಡುತ್ತದೆ. ಕಪ್ಪು ಹಣದ ಹೆಸರಿನಲ್ಲಿ ನೋಟು ಅಮಾನ್ಯ ಮಾಡಿ ನಗೆಪಾಟಲಿಗೆ ಈಡಾಗುವ ಬದಲು ಕೇಂದ್ರ ಸರಕಾರ ಡಿಜಿಟಲ್ ಇಂಡಿಯಾ, ಕ್ಯಾಶ್ ಲೆಸ್ ವ್ಯವಹಾರದತ್ತ ಜನರ ಗಮನವನ್ನು ಸೆಳೆದಿತ್ತು.