ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೊಂದಲ ವಯಸ್ಸು ಮೀರಿದ ತಂಡ ಹೊರಕ್ಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ತಾಲೂಕಿನ ಶಿರಾಲಿಯ ತಟ್ಟಿಹಕ್ಕಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ 14 ಮತ್ತು 17 ವರ್ಷದ ವಯೋಮಿತಿಯ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆಟಗಾರರ ವಯಸ್ಸು, ತೂಕ ದೃಢೀಕರಣಕ್ಕೆ ಸಂಬಂಧಿಸಿದಂತೆ ಕೆಲವು ಕಾಲ ಗೊಂದಲ, ಗಲಾಟೆ ನಡೆದು ವಯಸ್ಸು ಮೀರಿದ ಆಟಗಾರರ ತಂಡವನ್ನು ಪಂದ್ಯಾವಳಿಯಿಂದ ಹೊರ ಕಳುಹಿಸಲಾಯಿತು.

ಸೋಮವಾರ ಶಿರಾಲಿಯ ತಟ್ಟಿಹಕ್ಕಲಿನಲ್ಲಿ ಬೆಳಗಾವಿ ವಿಭಾಗದ ಒಟ್ಟೂ 9 ಜಿಲ್ಲೆಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ, ಬಾಲಕಿಯರ 36 ತಂಡಗಳ ಕಬಡ್ಡಿ ಪಂದ್ಯಾವಳಿ ನಡೆದಿತ್ತು. ಮಧ್ಯಾಹ್ನ ಪಂದ್ಯಾವಳಿ ನಡೆಯುತ್ತಿರುವ ಸಂದರ್ಭದಲ್ಲಿ ಆಟಗಾರರ ವಯಸ್ಸು, ತೂಕದ ದೃಢೀಕರಣದ ನಂತರವೇ ಆಟಗಾರರಿಗೆ ಕಣಕ್ಕಿಳಿಯಲು ಅವಕಾಶ ನೀಡಲಾಗಿತ್ತು. ಪ್ರತಿ ಆಟಗಾರನ ಬಗ್ಗೆ ಮಾಹಿತಿ ಪಡೆಯಲು ಆಧಾರ್ ಕಾರ್ಡ್, ಸ್ಟೂಡೆಂಟ್ ಟ್ರ್ಯಾಕ್ ಇನ್ ಸಿಸ್ಟಮ್ ಸೇರಿದಂತೆ ಆಯಾ ಶಾಲಾ ನೋಂದಣಿ ಸಂಖ್ಯೆಯನ್ನು ಈ ಸಂದರ್ಭದಲ್ಲಿ ಕಡ್ಡಾಯವಾಗಿ ಕೇಳಲಾಗಿತ್ತು. ಆದರೆ ಪಂದ್ಯಾವಳಿ ಗೆಲ್ಲಬೇಕೆಂಬ ನಿಟ್ಟಿನಲ್ಲಿ ಕೆಲವು ಶಾಲಾ ತಂಡ, ವಯಸ್ಸು ಮೀರಿದ ಆಟಗಾರರನ್ನು ಕಣಕ್ಕಿಳಿಸಿರುವುದು ಕ್ರೀಡಾಧಿಕಾರಿಗಳಿಗೆ ಗೊತ್ತಾಗಿದ್ದರಿಂದ ಧಾರವಾಡ ಪ್ರೌಢಶಾಲೆ ಮತ್ತು ಹಾವೇರಿ, ಗದಗ ಪ್ರಾಥಮಿಕ ಶಾಲಾ ತಂಡಗಳನ್ನು ಪಂದ್ಯಾವಳಿಯಿಂದ ನಿರ್ದಾಕ್ಷಿಣ್ಯವಾಗಿ ಹೊರ ಕಳುಹಿಸಲಾಯಿತು. ಈ ತಂಡದ ವಿರುದ್ಧ ಸೋತ ತಂಡಗಳಿಗೆ ಮತ್ತೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು. ಈ ಪರಿಣಾಮವಾಗಿ ಪಂದ್ಯದ ಆರಂಭದಲ್ಲಿಯೇ ಕಾರವಾರ ಪ್ರೌಢಶಾಲೆ ತಂಡ ತಕರಾರು ತೆಗೆದಿದ್ದು, ಮತ್ತೊಮ್ಮೆ ಕಬಡ್ಡಿ ಆಟಗಾರರನ್ನು ಅಂಗಳಕ್ಕೆ ಇಳಿಸುವ ಅವಕಾಶ ಪಡೆದುಕೊಂಡರು. ಕೆಲವು ಪಂದ್ಯಾವಳಿಗಳು ಮುಗಿದು ಹೋಗಿದ್ದರ ಪರಿಣಾಮ ಕೆಲವು ಕಾಲ ಕ್ರೀಡಾಂಗಣದಲ್ಲಿ ಗದ್ದಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಗೊಂದಲ ನಡೆಯುತ್ತಿರುವ ಸಂದರ್ಭದಲ್ಲೇ ಬಾಗಲಕೋಟೆ ಪ್ರೌಢಶಾಲಾ ತಂಡದ ವತಿಯಿಂದಲೂ ವಯಸ್ಸು ಮೀರಿದ ಆಟಗಾರರನ್ನು ಕಣಕ್ಕಿಳಿಸಲು ಯತ್ನಿಸಿದ್ದು, ಆಧಾರ್ ಕಾರ್ಡ್ ತಪಾಸಣೆ ವೇಳೆ ವಯಸ್ಸು ಮೀರಿದ ಆಟಗಾರರು ಅಲ್ಲಿಂದ ತೆರಳಿದರು. ಕ್ರೀಡಾಂಗಣಕ್ಕೆ ಪೊಲೀಸರು ಧಾವಿಸಿ ಉಂಟಾದ ಗೊಂದಲ, ಗದ್ದಲವನ್ನು ತಡೆದು ಸುಲಲಿತವಾಗಿ ಪಂದ್ಯಾವಳಿ ನಡೆಸಲು ಅನುವು ಮಾಡಿಕೊಟ್ಟರು. ಶಿಕ್ಷಣ ಇಲಾಖೆ ಕಬಡ್ಡಿ ಪಂದ್ಯಾಳಿಯಲ್ಲಿ ವಯಸ್ಸು ಮೀರಿದ ಆಟಗಾರರನ್ನು ಕಣಕ್ಕಿಳಿಸಿದ ಶಾಲೆಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎನ್ನುವುದು ಕಾದು ನೋಡಬೇಕಿದೆ.