ಕೋಳಿ ತ್ಯಾಜ್ಯದ ಗೊಬ್ಬರ ತಯಾರಿಕೆಗೆ ಕಾಪು ಪುರಸಭೆ ಮುಖ್ಯಾಧಿಕಾರಿ ಯತ್ನ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕೋಳಿ ತ್ಯಾಜ್ಯಗಳನಷ್ಟೇ ಪ್ರಮುಖವಾಗಿ ಬಳಸಿಕೊಂಡು ಯಾವುದೇ ರಾಸಾಯನಿಕವನ್ನು ಉಪಯೋಗಿಸದೆ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಗೊಬ್ಬರ ತಯಾರಿಕೆಗೆ ಚಾಲನೆ ನೀಡುವ ಮೂಲಕ, ತಾನು ಯಾವುದೇ ಜಿಲ್ಲೆಗೆ ಹೋದರೂ ತನ್ನ ಕರ್ತವ್ಯವನ್ನು ತಾನು ಮರೆಯುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಕಾಪು ಪುರಸಭೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಯಪ್ಪ.

ಮುಲ್ಕಿ, ಕಾರ್ಕಳ ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಕಾಪು ಪುರಸಭೆಗೆ ಕಾರ್ಯನಿರ್ವಹಣಾಧಿಕಾರಿಯಾಗಿ ನಿಯೋಜನೆಗೊಂಡ ಬಳಿಕ ಕಾಪು ಪುರಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವ ಮೂಲಕ ಜನರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡ ಪ್ರಥಮ ಅಧಿಕಾರಿಯಾಗಿ ಇವರು ರೂಪುಗೊಂಡಿದ್ದಾರೆ.

ಎಲ್ಲಾ ಗ್ರಾಮಗಳಲ್ಲೂ ಕೋಳಿ ತ್ಯಾಜ್ಯದ್ದು ಬಲುದೊಡ್ಡ ಸಮಸ್ಯೆ. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸೆದರೆ ಅದು ಅಲ್ಲೇ ಕೊಳೆತು ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿರುತ್ತದೆ. ಇದೀಗ ಅಂಥ ತ್ಯಾಜ್ಯವನ್ನೇ ಬಳಸಿ ಲಿಕ್ವಿಡ್ ಗೊಬ್ಬರ ತಯಾರಿಸುವ ಮೂಲಕ ಕೋಳಿ ತ್ಯಾಜ್ಯಕ್ಕೆ ಮುಕ್ತಿ ತೋರಿಸುದಲ್ಲದೆ, ಗೊಬ್ಬರ ತಯಾರಿ ಹಣ ಗಳಿಸುವ ಸುಲಭ ವಿಧಾನವೂ ಹೌದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಾಯಪ್ಪ ಹಾಗೂ ಅವರ ತಂಡ.

ಈ ಗೊಬ್ಬರ ತಯಾರಿಕೆಗೆ ಮಣ್ಣ ಮಡಿಕೆ, ಕೋಳಿ ತ್ಯಾಜ್ಯ, ಗೋಮೂತ್ರ, ಒಂದಿಷ್ಟು ಗೊಬ್ಬರ ಹಾಗೂ ಬೆಲ್ಲ ಸಾಕು. ಅತೀ ಕಡಿಮೆ ಖರ್ಚಿನಲ್ಲಿ ತಯಾರಿಸುವ ಈ ಲಿಕ್ವಿಡ್ ಗೊಬ್ಬರಕ್ಕೆ ಲೀಟರ್ ಒಂದಕ್ಕೆ 65 ರೂಪಾಯಿ ಬೆಲೆಯಿದೆ.

“ಮಡಕೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಹಾಕಲಾದ ಈ ವಸ್ತುಗಳು ಲಿಕ್ವಿಡ್ ಗೊಬ್ಬರವಾಗಿ ರೂಪುಗೊಳ್ಳಲು 45 ದಿನಗಳು ಬೇಕಾಗಿದ್ದು, ಅಗತ್ಯ ಬಿದ್ದರೆ ಸ್ಥಳ ಹಾಗೂ ಅದಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸಿದರೆ ಕಾಪು ಪುರಸಭೆಯ ವ್ಯಾಪ್ತಿಯ ಎಲ್ಲೂ ಬೇಕಾದರೂ ಈ ಗೊಬ್ಬರ ತಯಾರಿಗೆ ನಾನು ತಯಾರಿ” ಎನ್ನುವ ರಾಯಪ್ಪ, “ಈ ಕಾರ್ಯಕ್ಕೆ ಬೆಂಬಲವಾಗಿ ನಿಂತವರು ನನ್ನ ಪುರಸಭೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ನನ್ನ ಸಿಬ್ಬಂದಿ” ಎಂದು ಹೇಳುವುದನ್ನು ಮರೆತಿಲ್ಲ.