ಪೊಲೀಸ್ ಫೋನ್-ಇನ್ ಕಾರ್ಯಕ್ರಮಕ್ಕೆ ಹರಿದು ಬರುತ್ತಿದೆ ದೂರುಗಳ ಮಹಾಪೂರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜನರೊಂದಿಗೆ ನಿರಂತರ ಸಂಪರ್ಕದೊಂದಿಗೆ ಜನಸಾಮಾನ್ಯರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಸೇಖರ್ ನಡೆಸುತ್ತಿರುವ ಫೋನ್-ಇನ್ ಕಾರ್ಯಕ್ರಮಕ್ಕೆ ಇದೀಗ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಾರಕ್ಕೊಮ್ಮೆ ನಡೆಯುವ ಈ ಫೋನ್-ಇನ್ ಕಾರ್ಯಕ್ರಮ ಇದೀಗ 18ನೇ ವಾರವನ್ನು ಪೂರೈಸಿದ್ದು, ದೂರುಗಳ ಮಹಾಪೂರ ಹರಿಯುತ್ತಿದೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನ 9ರಂದು ನಡೆದ 18ನೇ ಫೋನ್-ಇನ್ ಕಾರ್ಯಕ್ರಮಕ್ಕೆ 22 ಕರೆಗಳು ಬಂದಿದ್ದು ಬಹುತೇಕ ಕರೆಗಳು ಟ್ರಾಫಿಕ್ ಸಮಸ್ಯೆಗೆ ಸಂಬಂಧಿಸಿದ್ದಾಗಿದ್ದವು. ಇನ್ನು ಕೆಲವು ಸಮಸ್ಯೆಗಳು ವಿವಿಧ ಇಲಾಖೆಗಳ ಸಹಕಾರವನ್ನು ಪಡೆದುಕೊಂಡು ಪರಿಹರಿಸಬೇಕಾಗಿದೆ.

ಆಯುಕ್ತ ಚಂದ್ರಸೇಖರ್ ಅವರು ಮೊದಲ ಬಾರಿಗೆ ಪತ್ರಿಕಾ ಸಂವಾದ ನಡೆಸಿದ ಸಂದರ್ಭದಲ್ಲಿ ಅವರಿಗೆ ಸಾರ್ವಜನಿಕರಿಂದ ಬಂದ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಪೊಲೀಸ್ ಇಲಾಖೆಯಿಂದ ಏಕೆ ಈ ರೀತಿಯ ಫೋನ್ ಇನ್ ನಡೆಸಬಾರದು ಎನ್ನುವ ಕಲ್ಪನೆ ಅವರಿಗೆ ಹೊಳೆದಿತ್ತು. ಕೂಡಲೇ ಅವರು ಅದನ್ನು ಇತರ ಪೊಲೀಸ್ ಅಧಿಕಾರಿಗಳ ಸಹಕಾರ ಪಡೆದು ಅನುಷ್ಠಾನಕ್ಕೆ ತಂದಿದ್ದರು. ಇದೀಗ ಪ್ರತೀ ಶುಕ್ರವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 11 ಗಂಟೆಯವರೆಗೆ ಫೋನ್-ಇನ್ ಕಾರ್ಯಕ್ರಮ ಆಯೋಜಿಸಿದ್ದಾರೆ.  ಮೊದಲ ಕಾರ್ಯಕ್ರಮ 2016ರ ಆ.5ರಂದು ನಡೆಸಲಾಗಿತ್ತು.

ಕರೆ ಮಾಡುವ ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವಂತೆಯೂ ಕಮಿಷನರ್ ಸಂಬಂಧಿತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಚಂದ್ರಶೇಖರ್ ಅವರ ಅನುಪಸ್ಥಿತಿಯಲ್ಲಿ ಡಿಸಿಪಿಗಳಾದ ಸಂಜೀವ ಪಾಟೀಲ್ ಮತ್ತು ಕೆ ಎಂ ಶಾಂತರಾಜು ಇದನ್ನು ನಡೆಸುತ್ತಾರೆ.

“ಸಾರ್ವಜನಿಕರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪೊಲೀಸ್ ಇಲಾಖೆಗೆ ಸಾಧ್ಯವಿಲ್ಲ. ಇತರ ಇಲಾಖೆಗಳ ಸಹಕಾರವೂ ಬೇಕಾಗಿದೆ” ಎನ್ನುತ್ತಾರೆ ಡಿಸಿಪಿ ಸಂಜೀವ್ ಪಾಟೀಲ್.