ದೇರಳಕಟ್ಟೆ ಬೆಳ್ಮ ಅಂಬೇಡ್ಕರ್ ಪದವಿನಲ್ಲಿ ಗಾಂಜಾ ಅಡ್ಡೆ

ಕಮಿಷನರ್ ಫೋನ್ ಇನ್ ಕಾರ್ಯಕ್ರಮದಲ್ಲಿ ದೂರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಅಕ್ರಮ ಗಾಂಜಾ ಅಡ್ಡೆಗಳ ಬಗ್ಗೆ ಹಲವು ಬಾರಿ ದೂರು ನೀಡಿದರೂ ಏನೂ ಪ್ರಯೋಜನವಾಗುತ್ತಿಲ್ಲ. ನಗರದ ಹಲವು ಕಡೆಗಳಲ್ಲಿ ಗಾಂಜಾ ಅಡ್ಡೆಗಳು ಇನ್ನಿಲ್ಲದಂತೆ ಹುಟ್ಟಿಕೊಂಡಿವೆ. ಇದೀಗ ಗ್ರಾಮೀಣ ಭಾಗದಲ್ಲೂ ಗಾಂಜಾ ಅಡ್ಡೆ ಹೆಚ್ಚಾಗಿದೆ. ದೇರಳಕಟ್ಟೆ ಸಮೀಪದ ಬೆಳ್ಮ ಅಂಬೇಡ್ಕರ್ ಪದವಿನಲ್ಲಿ ರಾತ್ರಿ ವೇಳೆ ಗಾಂಜಾ ವ್ಯವಹಾರ ನಡೆಯುತ್ತಿದ್ದು, ಇಲ್ಲಿ ಸೀಸಿ ಕ್ಯಾಮರಾ ಅಳವಡಿಸುವ ಅಗತ್ಯವಿದೆ” ಎಂದು ಸಾರ್ವಜನಿಕರೊಬ್ಬರು ದೂರಿದರು.

“ಈ ಬಗ್ಗೆ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಠಾಣಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು” ಎಂದು ಡಿಸಿಪಿ ಹನಮಂತ ರಾಯ ಪ್ರತಿಕ್ರಿಯೆ ನೀಡಿದರು. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜರುಗಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ದೂರು ಮತ್ತು ಸಲಹೆ ಕೇಳಿಬಂತು.

“ಬೈಕಂಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಈ ಬಗ್ಗೆ ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕು” ಎಂಬ ದೂರಿಗೆ ಉತ್ತರಿಸಿದ ಡಿಸಿಪಿ, “ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆದು ದುರಸ್ತಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು” ಎಂದು ಭರವಸೆ ಕೊಟ್ಟರು. ಅಲ್ಲದೆ “ನೋ ಪಾರ್ಕಿಂಗ್ ಬೋರ್ಡುಗಳನ್ನು ಅಗತ್ಯವಿರುವ ಕಡೆಗಳಲ್ಲಿ ಹಾಕಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.  ಮೀಟರ್ ಅಳವಡಿಸದೆ ಸಂಚರಿಸುವ ರಿಕ್ಷಾಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ರಿಕ್ಷಾ ಚಾಲಕರ ಸಭೆ ನಡೆಸಲು ಸೂಚನೆ ನೀಡಿದರು.

“ನಗರದಲ್ಲಿ ತಳ್ಳುಗಾಡಿಗಳ ಸಮಸ್ಯೆ ವಿಪರೀತವಾಗಿದೆ. ಸೆಂಟ್ರಲ್ ಮಾರ್ಕೆಟ್ ಸುತ್ತಮುತ್ತ ತಳ್ಳುಗಾಡಿಗಳ ವ್ಯಾಪಾರದಿಂದ ವಾಹನ ಸಂಚಾರಕ್ಕೆ ಇನ್ನಿಲ್ಲದ ತೊಂದರೆ ಉಂಟಾಗುತ್ತದೆ” ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದರು. “ಈ ಬಗ್ಗೆ ತಾನು ವಿಶೇಷ ಗಮನ ಹರಿಸಿ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುವೆ” ಎಂದು ಡಿಸಿಪಿ ಹನುಮಂತ ರಾಯ ಹೇಳಿದರು.

“ಗ್ರಾಮೀಣ ಭಾಗದಿಂದ ಬರುವ ಬಸ್ಸುಗಳು ಸ್ಟೇಟ್ ಬ್ಯಾಂಕ್ ತನಕ ಹೋಗುತ್ತವೆ ಎಂದು ಹೇಳಿ ಬಳಿಕ ಕಂಕನಾಡಿಯಲ್ಲಿ ಇಳಿಸಿ ಪ್ರಯಾಣಿಕರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದಾರೆ. ಇದರಿಂದ ವೃದ್ಧರು, ಅಶಕ್ತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಅಲ್ಲಿ ಬಸ್ ನಿಲ್ದಾಣವಿಲ್ಲದೇ, ನಿಲ್ಲಲು ಜಾಗವೂ ಇಲ್ಲದೇ ಲಗ್ಗೇಜು ಇಳಿಸಿ, ಇನ್ನೊಂದು ಬಸ್ಸಿಗೆ ಹತ್ತಲು ಮತ್ತೆ ಕಷ್ಟಪಡಬೇಕಾಗುತ್ತದೆ” ಎಂದು ಒಬ್ಬರು ದೂರಿದರು. ಈ ಬಗ್ಗೆ ಗಮನ ಹರಿಸುವುದಾಗಿ ಡಿಸಿಪಿ ಭರವಸೆ ಕೊಟ್ಟರು.