ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ನಾಳೆ ಮನಪಾಕ್ಕೆ ಕಮ್ಯುನಿಸ್ಟರ ಮುತ್ತಿಗೆ

ಮಂಗಳೂರು : ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಪಾಲಿಕೆ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದು ಇದನ್ನು ಖಂಡಿಸಿ ನಾಳೆ ಮಂಗಳೂರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಡಿವೈಎಫ್‍ಐ ಹಾಗೂ ಸಿಪಿಐಎಂ ನಿರ್ಧರಿಸಿದೆ ಎಂದು ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ.

“ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ತುಂಬೆ ವೆಂಟೆಡ್ ಡ್ಯಾಂನಿಂದ ಪೂರೈಸುವ ನೀರಿನ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕಳೆದ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪಿಸಲು ಬಾವಿ, ಕೊಳವೆ ಬಾವಿಗಳನ್ನು ಕೊರೆಯಲಾಗಿತ್ತು. ಆದರೆ ಈ ಬಾರಿ ಅದನ್ನು ನಿರ್ವಹಣೆ ಮಾಡದೆ ಮತ್ತೆ ಟ್ಯಾಂಕರ್ ಮೂಲಕ ನೀರು ಪೂರೈಸೋದು ಸರಿಯಲ್ಲ”’ಎಂದು ಹೇಳಿ, ಇದನ್ನು ವಿರೋಧಿಸಿ ನಾಳೆ ಪಕ್ಷದ ವತಿಯಿಂದ ಪಾಲಿಕೆಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು. “ತುಂಬೆ ಡ್ಯಾಂನಲ್ಲಿ ಬೇಕಾದಷ್ಟು ನೀರಿದೆ. ಕಳೆದ ಬಾರಿ ಹಳೆ ಡ್ಯಾಂ ಇದ್ದಾಗ ಇದ್ದ ನೀರಿಗಿಂತ ಹೆಚ್ಚಿಗೆ ನೀರು ಇದೆ. ನೂತನ ಡ್ಯಾಂ ಈ ಹಿಂದಿನ ಡ್ಯಾಂಗಿಂತಲೂ ಹೆಚ್ಚು ನೀರು ಸಂಗ್ರಹಣಾ ಸಾಮಥ್ರ್ಯ ಹೊಂದಿದೆ. ದಿನಕ್ಕೊಂದು ನಿರ್ಧಾರವನ್ನು ಪಾಲಿಕೆ ಮೇಯರ್ ಕೈಗೊಳ್ಳುವುದಕ್ಕಿಂತ ಸತತವಾಗಿ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಿ” ಎಂದರು.“ಪ್ರತೀ ವರ್ಷ ಕೆರೆ ಅಭಿವೃದ್ಧಿ ವಿಚಾರದಲ್ಲಿ ಕೋಟ್ಯಂತರ ಕೆರೆ ಅಭಿವೃದ್ಧಿ ಶುಲ್ಕ ವಸೂಲು ಮಾಡುತ್ತಿದೆ. ಆದರೆ ಕೆರೆ ಹೂಳೆತ್ತುವಿಕೆ ಕೇವಲ ನಾಟಕವಾಗಿದೆ. ಕೆರೆ ಶುಲ್ಕ ಹೆಸರಿನಲ್ಲಿ ಲಕ್ಷಾಂತರ ರೂ ಸಂಗ್ರಹ ಮಾಡುತ್ತಿದ್ದರೂ ಯಾವುದೇ ಕೆರೆಗಳ ಅಭಿವೃದ್ಧಿಯೂ ಆಗಿಲ್ಲ ಎಂದರು. ನಗರದ ಕೆರೆಗಳೂ ಕಣ್ಮರೆಯಾಗುತ್ತಿದೆ. ಸರಕಾರಿ ಬಾವಿಗಳನ್ನು ದುರಸ್ತಿಪಡಿಸಿ” ಎಂದು ಒತ್ತಾಯಿಸಿದರು.

ಡಿವೈಎಫ್‍ಐ ಜಿಲ್ಲ ಕಾರ್ಯದರ್ಶಿ ಸಂತೋಷ್ ಬಜಾಲ್, ಯೊಗೇಶ್ ಜಪ್ಪನಮೊಗರು,  ಸಂತೋಷ್ ಶಕ್ತಿನಗರ ಮೊದಲಾದವರು ಉಪಸ್ಥಿತರಿದ್ದರು.