ಹೊನ್ನಾವರ ಬಳಿ ಕೋಮು ಘರ್ಷಣೆ ; ಲಾಠಿ ಪ್ರಹಾರ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ತಾಲೂಕಿನ ಚಂದಾವರದಲ್ಲಿ ಶ್ರೀ ಹನುಮಂತ ದೇವಸ್ಥಾನದ ಕಾರ್ಯಕ್ರಮ ಹಾಗೂ ಮುಸ್ಲಿಂ ಸಮಾಜದ ಈದ್ ಮಿಲಾದ್ ಹಬ್ಬದ ಆಚರಣೆಗೆ ಜಾಗದ ಸಂಬಂಧಿಸಿ ಎರಡು ಕೋಮುಗಳ ನಡುವೆ ಉದ್ವಿಗ್ನ ವಾತಾವರಣವುಂಟಾಗಿ ಪೋಲಿಸರು ಲಾಠಿ ಚಾರ್ಜ್ ನಡೆಸಿದ ಘಟನೆ ನಡೆಯಿತು. ಘಟನೆಯಿಂದಾಗಿ ಹಲವರು ಗಾಯಗೊಂಡಿದ್ದಾರೆ. 20ಕ್ಕೂ ಹೆಚ್ಚು ಜನರನ್ನು ಬಂಧಿಸಿ ಕಾರವಾರ ಜೈಲಿಗೆ ಒಯ್ಯಲಾಗಿದೆ. ಕಮಲಾಕರ ನಾಯ್ಕ ಎಂಬವರಿಗೆ ತಲೆಗೆ ಪೆಟ್ಟು ಬಿದ್ದು ಚಿಕಿತ್ಸೆಗಾಗಿ ಕುಮಟಾದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಹಿನ್ನೆಲೆ  ಚಂದಾವರದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಹನುಮಂತ ದೇವಸ್ಥಾನವಿದ್ದು ಪ್ರತಿ ವರ್ಷ ಕಾರ್ತಿಕ ದೀಪೋತ್ಸವದಲ್ಲಿ ನಾಕಾ ವೃತ್ತದ ಬಳಿ ಭಕ್ತರು ಹನುಮಂತ ದೇವರ ಉತ್ಸವಮೂರ್ತಿ ಸ್ಥಾಪಿಸಿ ದೇವಸ್ಥಾನದವರೆಗೆ ಕೇಸರಿ ಪತಾಕೆಗಳಿಂದ ಅಲಂಕರಿಸಿ ಆಚರಿಸುತ್ತಾರೆ. ನಂತರ ಬರುವ ಈದ್ ಮಿಲಾದ್ ಹಬ್ಬದ ನಿಮಿತ್ತ ಮುಸ್ಮಿಂ ಸಮಾಜದವರೂ ಈ ಸ್ಥಳದಲ್ಲಿ ಗುಮ್ಮಟ ಸ್ಥಾಪಿಸಿ ಹಸಿರು ಪತಾಕೆಗಳಿಂದ ಶೃಂಗರಿಸಿ ಆಚರಿಸುತ್ತಿದ್ದಾರೆ. ಒಂದಕ್ಕೊಂದು ಅಡಚಣೆ ಆಗದಿರುವುದರಿಂದ ಎಲ್ಲವೂ ಶಾಂತಿಯಿಂದಲೇ ನಡೆದು ಬಂದಿತ್ತು. “ನಾಕಾವೃತ್ತದಲ್ಲಿ ಈ ವರ್ಷ ಹನುಮಂತ ದೇವರ ಮೂರ್ತಿ ಸ್ಥಾಪಿಸುವ ಸ್ಥಳದಲ್ಲಿ ಗುಮ್ಮಟ ಇಡುವುದು ಮತ್ತು ಪತಾಕೆ ಹಚ್ಚುವುದು ಬೇಡ. ಈ ಸ್ಥಳವನ್ನು ಬಿಟ್ಟು ಗುಮ್ಮಟ ಇಡಲಿ” ಎಂದು ಹಿಂದೂ ಭಕ್ತರು ಪಟ್ಟು ಹಿಡಿದರು.

ಶಾಂತಿ ಸಭೆ ವಿಫಲ ಸೋಮವಾರ ಹೊನ್ನಾವರದ ತಹಸೀಲ್ದಾರ ವಿ ಆರ್ ಗೌಡ, ಪಿಎಸ್‍ಐ ಅನಂದಮೂರ್ತಿ ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಎರಡೂ ಸಮುದಾಯದ ಮುಖಂಡರ ಶಾಂತಿ ಸಭೆ ಕರೆಯಲಾಗಿತ್ತು. ಇದೇ ಸ್ಥಳದಲ್ಲಿ ಗುಮ್ಮಟ ಇಡಬೇಕು ಎಂದು ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಮನವಿ ಮಾಡಿದರು. ಅದಕ್ಕೆ ಹಿಂದು ಸಂಘಟನೆಗಳ ಕಾರ್ಯಕರ್ತರು ಒಪ್ಪಲಿಲ್ಲ. ಯಾವುದೇ ನಿರ್ಣಯ ಬಾರದೇ ಸಭೆ ಕೊನೆಗೊಂಡಿತು.

ಕಲ್ಲು ತೂರಾಟ ಚಂದಾವರದಲ್ಲಿ ಎರಡು ಕೋಮುಗಳ ನಡುವಿನ ಗೊಂದಲವು ಶುಕ್ರವಾರ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಯಿತು. ಚಂದಾವರದ ಸುಲ್ತಾನಕೇರಿ ಬಳಿ ಬಿಜೆಪಿ ಮುಖಂಡ ಸೂರಜ್ ನಾಯ್ಕ ಸೋನಿ ಅವರ ಕಾರನ್ನು ನಿಲ್ಲಿಸಿದ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ಹೊಡೆದು ಗಾಜು ಒಡೆದರು. ಒಡೆದ ಗಾಜಿನೊಂದಿಗೆ ಚಂದಾವರ ನಾಕಾ ವೃತ್ತದ ಬಳಿ ಬಂದಾಗ ಅಲ್ಲಿ ಸೇರಿದ್ದ ಹಿಂದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಂದೆಡೆಗೆ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಜಮಾವಣೆ ಗೊಂಡಿದ್ದರು. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದು ಪೋಲಿಸರು ಲಾಠಿ ಚಾರ್ಜ ನಡೆಸಿದರು. ಇದರಿಂದ ಹಲವರು ಗಾಯಗೊಂಡರು.