ನಿಲ್ಲದ ಮೊಬೈಲ್ ಸಂದೇಶ ಆತಂಕ

ಬಂಟ್ವಾಳದಲ್ಲಿ ಕೆಲ ತಿಂಗಳಿನಿಂದ ನಡೆಯುತ್ತಿರುವ ಕೋಮು ಸಂಬಂಧಿ ಘಟನೆಗಳಿಗೆ ಮೊಬೈಲ್ ಗಳಲ್ಲಿ ಹರಿದಾಡುತ್ತಿರುವ ವದಂತಿಯುತ ಸಂದೇಶಗಳು ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿನ್ನಲೆಯಲ್ಲಿ ಮೊಬೈಲ್ ಸಂದೇಶಗಳ ಮೇಲೆ ಹದ್ದಿನಗಣ್ಣಿಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಪದೇ ಪದೇ ಎಚ್ಚರಿಸುತ್ತಲೇ ಬಂದಿದ್ದರು. ಆದರೂ ಕಿಡಿಗೇಡಿಗಳು ಮೊಬೈಲ್ ಸಂದೇಶಗಳ ಮೂಲಕ ಆತಂಕ ಸೃಷ್ಟಿಸಿ ಹಾಕುವುದು ಮಾತ್ರ ನಿಯಂತ್ರಣಕ್ಕೆ ಬಂದೇ ಇಲ್ಲ. ಶುಕ್ರವಾರ ಸಂಜೆಯಿಂದ ಅಮಾಯಕ ಯುವಕರ ಬಂಧನ ವಿರೋಧಿಸಿ ಶನಿವಾರ ಬೆಳಿಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂಬ ಸಂದೇಶ ಸಂಘಟನೆಯೊಂದರ ಹೆಸರಿನಲ್ಲಿ ಸಾಮಾಜಿಕ ತಾಣಗಳಲ್ಲಿ ಮಿಂಚಿನ ಸಂಚಾರ ಪಡೆದಿತ್ತು. ಈ ಹಿನ್ನಲೆಯಲ್ಲಿ ಶನಿವಾರ ಮುಂಜಾನೆಯೇ ಬಂಟ್ವಾಳಕ್ಕೆ ಆಗಮಿಸಿದ ಜಿಲ್ಲಾ ಎಸ್ಪಿ ಸುಧೀರ್  ಕುಮಾರ್ ರೆಡ್ಡಿ ಅವರು ರಾಜ್ಯ ಮೀಸಲು ಸಶಸ್ತ್ರ ಪಡೆ ಹಾಗೂ ಪೊಲೀಸ್ ಸಿಬ್ಬಂದಿಗಳ ವಿಶೇಷ ರಂಗ ತಾಲೀಮು, ಕವಾಯತು ಹಾಗೂ ಪಥ ಸಂಚಲನ ನಡೆಸುವ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅಲ್ಲದೆ ತಾಲೂಕಿನ ಕೆಲವೊಂದು ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.