ಗಂಗಾವತಿಯಲ್ಲಿ ಕೋಮುಗಲಭೆ

ಗಂಗಾವತಿ (ಕೊಪ್ಪಳ ಜಿಲ್ಲೆ) : ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಿನ್ನೆ ಭುಗಿಲೆದ್ದ ಕೋಮು ಗಲಭೆಯಲ್ಲಿ ಉಪ ಪೊಲೀಸ್ ಅಧೀಕ್ಷಕ (ಡಿವೈಎಸ್ಪಿ) ಮತ್ತು ಪತ್ರಕರ್ತನೊಬ್ಬರ ಸಹಿತ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

karnataka

ಉದ್ರಿಕ್ತ ಮಂದಿಯಿಂದ ಎರಡು ರಿಕ್ಷಾ ಹಾಗೂ ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ, ಇಲ್ಲವೇ ಹಾನಿಗೊಂಡಿವೆ. ಈ ಗಲಭೆ ಬಳಿಕ ಪರಿಸರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಪರಿಸ್ಥಿತಿಯತ್ತ ನಿಗಾವಿರಿಸಲು ಹೆಚ್ಚುವರಿ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ.

ಗಾಯಗೊಂಡವರಲ್ಲಿ ಡಿವೈಎಸ್ಪಿ ಸಂದಿಗ್ವಾಡ್, ಟೀವಿ ಪತ್ರಕರ್ತ ವೆಂಕಟೇಶ್ ಹೊಸಳ್ಳಿ ಮತ್ತು ಸ್ಥಳೀಯ ಮುಸ್ಲಿಂ ಮುಖಂಡ ಯೂಸೂಫ್ ಖಾದ್ರಿ ಪ್ರಮುಖರಾಗಿದ್ದಾರೆ.

ಹುನುಮ ಜಯಂತಿ ಮತ್ತು ಈದ್ ಹಬ್ಬದ ನಿಮಿತ್ತ ಗುಂಡಮ್ಮ ಕ್ಯಾಂಪಿನ ಕೆಲವು ಮನೆಗಳ ಮೇಲೆ ಬಾವುಟ ಅಳವಡಿಸಲು ಪ್ರಯತ್ನಿಸಿದಾಗ ಗಲಭೆ ಮಾತಿಗೆ ಮಾತು ಬೆಳೆದು ಗಲಭೆ ಸೃಷ್ಟಿಗೊಂಡಿದೆ. ಈ ಸಂದರ್ಭದಲ್ಲಿ ಎರಡು ಸಮುದಾಯದ ಯುವಕರು ಮಾರಾಮಾರಿ ನಡೆಸಿದರು.

ಸ್ವಲ್ಪ ಹೊತ್ತಿನ ಬಳಿಕ ಕೆಲವು ಮುಸುಕುಧಾರಿಗಳು ಅಲ್ಫಿಯಾ ಸರ್ಕಲಿನಲ್ಲಿರುವ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಈ ಸುದ್ದಿ ಹಬ್ಬುತ್ತಲೇ ಮುಸ್ಲಿಂ ಸಮುದಾಯದ ಮಂದಿ ಮಸೀದಿಯಲ್ಲಿ ಸಭೆ ಸೇರಿದರು. ಇದೇ ವೇಳೆ ಕೆಲವು ಯುವಕರು ಮಂದಿರವೊಂದಕ್ಕೆ ಕಲ್ಲು ತೂರಿದರು. ಇದರಿಂದ ಅಲ್ಲಿದ್ದ ಭಕ್ತರಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದರು.

ಈ ಘಟನೆಗಳ ನಂತರ ಎರಡೂ ಕೋಮಿನ ಯುವಕರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬೀದಿಗಿಳಿದು ಗಲಭೆ ನಡೆಸಿದ್ದಾರೆ.