ಜಿಲ್ಲೆಯಲ್ಲಿ ಸ್ತ್ರೀಲಿಂಗ ಅನುಪಾತ ಇಳಿಕೆ ಪರಿಶೀಲನೆಗೆ ತಜ್ಞರ ತಂಡ ರಚನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ತ್ರೀಲಿಂಗ ಅನುಪಾತ ಇಳಿಕೆಯಾಗಿರುವ ಪ್ರಕರಣದ ಹಿಂದಿನ ವೈಜ್ಞಾನಿಕ ಕಾರಣಗಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಕೆ ಜಿ ಜಗದೀಶ್, ಆರೋಗ್ಯ ಇಲಾಖೆ ಅಧಿಕಾರಿ ನಾಯಕತ್ವದಲ್ಲಿರುವ ನಾಲ್ಕು ಸದಸ್ಯರನ್ನು ಒಳಗೊಂಡ ತಜ್ಞರ ತಂಡವನ್ನು ಅಸ್ಥಿತ್ವಕ್ಕೆ ತಂದಿದ್ದಾರೆ.

ಸಮಿತಿಯು ಒಂದು ತಿಂಗಳೊಳಗೆ ವರದಿಯನ್ನು ಒಪ್ಪಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ ತಡೆಯ ತಜ್ಞರ ಸಮಿತಿಯ ಮುಖ್ಯಸ್ಥ ವಿ ಎಸ್ ಉಗ್ರಪ್ಪ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಜಿಲ್ಲೆಯ ಮಕ್ಕಳ ಅನುಪಾತ ಇಳಿಕೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ 2017ರ ಅಂಕಿ ಅಂಶದ ಪ್ರಕಾರ 6 ವರ್ಷದವರೆಗಿನ ಮಕ್ಕಳ ಅನುಪಾತ 1000 ಗಂಡು ಮಕ್ಕಳಿಗೆ 947 ಹೆಣ್ಣು ಮಕ್ಕಳು. ಆದರೆ 2001ರಲ್ಲಿ ಈ ಅಂಕಿಅಂಶ 1019 ಹೆಣ್ಣುಮಕ್ಕಳು ಮತ್ತು  1,000 ಗಂಡುಮಕ್ಕಳು ಆಗಿತ್ತು. ಈ ಇಳಿಕೆಗೆ ಕಾರಣವೇನೆಂಬುದನ್ನು ಪತ್ತೆಹಚ್ಚುವಂತೆ ಜಿಲ್ಲಾಧಿಕಾರಿಗೆ ಹೇಳಿದ್ದಾರೆ.

ಇದರೊಂದಿಗೆ ಬೆಳ್ತಂಗಡಿ ತಾಲೂಕಿನಲ್ಲಿ ವರದಿಯಾದ ಅಸಹಜ ಸಾವುಗಳ ಹಿಂದಿರುವ ಕಾರಣಗಳ ತನಿಖೆಗೆ ಎಸ್ಪಿ ನಾಯಕತ್ವದ ಆರು ಮಂದಿ ಸದಸ್ಯರ ಸಮಿತಿಯನ್ನೂ ರಚಿಸಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಘಟನೆಯ ಲೋಪದೋಷಗಳನ್ನು ಪರಿಶೀಲಿಸಲು ಸಮಿತಿಗಳನ್ನು ರಚಿಸಿದ್ದಾರೆ. ಸಂಸ್ಥೆಗೆ ಆಗಸ್ಟ್ 1ರಂದು ಭೇಟಿ ನೀಡಿದ ಉಗ್ರಪ್ಪ ಕಾವ್ಯಾಳ ಸಾವಿಗೆ ಸಂಬಂಧಿಸಿದಂತೆ ಗಮನಿಸಿದ ದೋಷಗಳ ತನಿಖೆಗೆ ಈ ಸಮಿತಿಗಳನ್ನು ರಚಿಸಲಾಗಿದೆ. ಈ ಲೋಪದೋಷಗಳ ವರದಿಯನ್ನು ಸಲ್ಲಿಸುವಂತೆ ಉಗ್ರಪ್ಪರು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.