ಅವನಿಗಾಗಿ ಬಂದೆ ; ಆದರೆ ಆತನಿಗೆ ಮದುವೆಯಾಗಿ ಬಿಟ್ಟಿದೆ

ಸಾಂದರ್ಭಿಕ ಚಿತ್ರ

ಚೇತನ

ಪ್ರ : ನಾನು ಸಂಜೆಯ ಕಾಲೇಜಿಗೆ ಹೋಗುತ್ತಿದ್ದೆ. ಹಗಲಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ. ಅವನು ಡಿಪ್ಲೋಮಾ ಮುಗಿಸಿ ಕೆಲಸದಲ್ಲಿದ್ದರೂ ಒಂದು ಡಿಗ್ರಿ ಇದ್ದರೆ ಭವಿಷ್ಯಕ್ಕೆ ಒಳ್ಳೆಯದು ಅಂತ ನಮ್ಮ ಕಾಲೇಜಿಗೇ ಸೇರಿಕೊಂಡಿದ್ದ. ಮೊದಲೆರಡು ವರ್ಷ ನಮ್ಮ ನಡುವೆ ಅಂತಹ ಸ್ನೇಹವಿಲ್ಲದಿದ್ದರೂ ಫೈನಲ್ ಇಯರಿನಲ್ಲಿ ಏರ್ಪಡಿಸಿದ್ದ ಪಿಕ್ನಿಕ್ಕಿನ ನಂತರ ಒಳ್ಳೆಯ ಸ್ನೇಹಿತರಾದೆವು. ಕಾಲೇಜು ಜೀವನ ಮುಗಿಯುವ ಹೊತ್ತಿಗೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಅದೇ ಸಮಯದಲ್ಲಿ ನಮ್ಮ ತಂದೆಗೆ ಚೆನೈಗೆ ವರ್ಗವಾದ ಕಾರಣ ನಾವೆಲ್ಲ ಅಲ್ಲಿಗೆ ಶಿಫ್ಟ್ ಆಗುವುದು ಅನಿವಾರ್ಯವಾಯಿತು. ಅವನನ್ನು ಬಿಟ್ಟು ಹೋಗಲೇ ಮನಸ್ಸು ಬರದಿದ್ದರೂ ಬೇರೆ ದಾರಿಯೇ ಇರಲಿಲ್ಲ. ಆದಷ್ಟು ಬೇಗ ಪುನಃ ಇಲ್ಲಿಗೇ ವಾಪಾಸು ಬರುತ್ತೇನೆ ಅಂತ ಭರವಸೆ ಇತ್ತು ಕುಟುಂಬದವರ ಜೊತೆ ಚೆನೈಗೆ ತೆರಳಿದೆ. ನನ್ನ ದುರಾದೃಷ್ಟಕ್ಕೆ ಟ್ರೈನಿನಲ್ಲಿ ಹೋಗುವಾಗ ನನ್ನ ಮೊಬೈಲ್ ಕಳೆದುಹೋಯಿತು. ಅದರ ಜೊತೆಗೆ ಅದರಲ್ಲಿ ಸ್ಟೋರ್ ಆಗಿದ್ದ ಎಲ್ಲ ನಂಬರ್‍ಗಳೂ ಕಳೆದುಹೋದವು. ಅದರಿಂದಾಗಿ ಅವನನ್ನು ಸಂಪರ್ಕಿಸಲೇ ಆಗಲಿಲ್ಲ. ಚೆನೈಗೆ ಹೋದ ನಂತರ ನಮ್ಮ ತಾಯಿಗೆ ಆರೋಗ್ಯ ಹದಗೆಟ್ಟು ಆಪರೇಶನ್ ಮಾಡಬೇಕಾಯಿತು. ನಾನೊಬ್ಬಳೇ ಮಗಳಾದ ಕಾರಣ ಕುಟುಂಬ ನಿರ್ವಹಣೆ ಮತ್ತು ತಾಯಿಯನ್ನು ನೋಡಿಕೊಳ್ಳುವ ಎಲ್ಲ ಜವಾಬ್ದಾರಿ ನನ್ನ ಮೇಲೆ ಬಿತ್ತು. ಅಪ್ಪನಿಗೂ ಹೆಚ್ಚು ರಜೆ ತೆಗೆದುಕೊಳ್ಳಲು ಆಗಲಿಲ್ಲ. ಮನದ ಮೂಲೆಯಲ್ಲಿ ಅವನ ನೆನಪು ಸತಾಯಿಸುತ್ತಿತ್ತು. ಆರು ತಿಂಗಳ ನಂತರ ತಾಯಿ ಸ್ವಲ್ಪ ಸೌಖ್ಯವಾದ ನಂತರ ಈ ಊರಿಗೆ ಅವನಿಗಾಗಿ ಓಡೋಡಿ ಬಂದೆ. ಅವನು ಕೆಲಸ ಮಾಡುತ್ತಿದ್ದ ಆಫೀಸಿಗೆ ಹೋದೆ. ಅವನನ್ನು ನೋಡಿದ ಸಂತಸದಲ್ಲಿ ಅವನನ್ನು ಬಿಗಿದಪ್ಪಿದೆ. ಆದರೆ ನನ್ನಿಂದ ದೂರಸರಿದ ಅವನು ಲೋಕಾಭಿರಾಮವಾಗಿ ಮಾತಾಡಿದ. ಇನ್ನೊಂದು ಚೇಂಬರಿನಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಕರೆದು ತನ್ನ ಹೆಂಡತಿ ಅಂತ ಪರಿಚಯ ಮಾಡಿಕೊಟ್ಟ. ನನಗೆ ಭೂಮಿಯೇ ಕುಸಿದ ಅನುಭವ. ಅಂತೂ ಸಾವರಿಸಿಕೊಂಡು ಹೊರಬಂದೆ. ನನ್ನ ಹಿಂದೇ ಬಂದ ಅವನು `ಯಾಕೆ ಹೀಗೆ ಮಾಡಿದೆ? ನಿನ್ನ ಕಾಂಟೇಕ್ಟೇ ಇಲ್ಲದ ಕಾರಣ ನೀನು ನನ್ನನ್ನು ಮರೆತಿರಬಹುದು ಅಂತ ಭಾವಿಸಿ ಬೇರೆ ಮದುವೆಯಾದೆ’ ಅಂತಂದ. ಭಾರವಾದ ಹೃದಯದಿಂದ ಚೆನೈಗೆ ತೆರಳಲೂ ಮನಸ್ಸು ಬರದೇ ನಾನು ಮೊದಲು ಕೆಲಸ ಮಾಡುತ್ತಿದ್ದ ಕಡೆಯೇ ಕೆಲಸಕ್ಕೆ ಸೇರಿಕೊಂಡಿದ್ದೇನೆ. ಅವನು ಪುನಃ ನನಗೆ ಸಿಗಬಹುದಾ?

: ನಾವೊಂದು ಬಗೆದರೆ ದೇವರು ಇನ್ನೊಂದೇ ಬಗೆದಿರುತ್ತಾನೆ. ನಿಮ್ಮ ದುರಾದೃಷ್ಟಕ್ಕೆ ಸೆಲ್‍ಫೋನೂ ಕಳೆದುಹೋಗಿದ್ದಲ್ಲದೇ ಸಂಸಾರ ತಾಪತ್ರಯದಲ್ಲಿ ಸಿಕ್ಕಿಹಾಕಿಕೊಳ್ಳುವಂತಾಯಿತು. ಬಹುಶಃ ನಿಮ್ಮ ಅದೃಷ್ಟದಲ್ಲಿ ಅವನು ಬರೆದಿಲ್ಲ, ಮದುವೆಗಳು ಸ್ವರ್ಗದಲ್ಲಿ ನಡೆಯುತ್ತದೆ ಅಂತ ಅದಕ್ಕೇ ಹೇಳುವುದು. ನನಗನಿಸುತ್ತದೆ ನಿಮ್ಮ ಪ್ರೀತಿಯೂ ಅಷ್ಟೊಂದು ಗಟ್ಟಿಯಾಗಿರಲಿಲ್ಲ ಅಂತ. ನಿಮ್ಮ ಮೊಬೈಲ್ ಕಳೆದುಹೋದರೂ ನೀವು ಹೇಗಾದರೂ ಅವನ ಆಫೀಸ್ ನಂಬರಾದರೂ ಪತ್ತೆ ಮಾಡಿ ಅವನನ್ನು ಸಂಪರ್ಕಿಸಿ ನಿಮ್ಮ ಕಷ್ಟ ಹೇಳಿಕೊಂಡಿದ್ದರೆ ಅವನು ಅಷ್ಟು ಬೇಗ ಮದುವೆಯಾಗುತ್ತಿರಲಿಲ್ಲವೇನೋ. ನೀವು ಅದೇ ನಂಬರಿನ ಡುಪ್ಲಿಕೇಟ್ ಸಿಮ್ ತೆಗೆದುಕೊಂಡು ಕಡಿಮೆ ಕ್ರಯದ್ದು ಬೇರೆ ಸೆಟ್ ತೆಗೆದುಕೊಂಡಿದ್ದರೆ ಅವನು ಸಂಪರ್ಕಿಸುತ್ತಿದ್ದನೇನೋ. ಅಥವಾ ಅವನು ನಿಮ್ಮ ತಂದೆಯ ವಿಳಾಸ ಪತ್ತೆ ಮಾಡುವುದರ ಮೂಲಕವಾದರೂ ಸಂಪರ್ಕಿಸಬಹುದಿತ್ತು. ನೀವು ಸಂಪರ್ಕಕ್ಕೆ ಸಿಗಲಿಲ್ಲ ಅಂದ ಮಾತ್ರಕ್ಕೆ ನಿಮಗೇನಾಯಿತೋ ಅನ್ನುವ ಆತಂಕವೂ ಅವನಿಗಾಗದಿದ್ದುದು ಆಶ್ಚರ್ಯ. ನಿಜವಾಗಿ ಅವನು ನಿಮ್ಮನ್ನು ಪ್ರೀತಿಸುತ್ತಿದ್ದರೆ ಹೇಗಾದರೂ ಅವನು ನಿಮ್ಮನ್ನು ಕಾಂಟೇಕ್ಟ್ ಮಾಡುತ್ತಿದ್ದ. ಅವನು ನಿಮ್ಮನ್ನು ಅಷ್ಟು ಬೇಗ ಮರೆತು ಬೇರೆ ಮದುವೆಯಾದ ಅಂದರೆ ನಿಮಗೆ ಅವನು ಸರಿಯಾದವನೇ ಆಗಿರಲಿಲ್ಲ.  ನೀವೀಗ ಏನೇ ಮಾಡಿದರೂ ಅವನಿಗೀಗಾಗಲೇ ಮದುವೆಯಾದ್ದರಿಂದ ಅವನು ನಿಮಗೆ ಸಿಗುವುದಿಲ್ಲ. ಈಗ ನೀವು ಆತನ ಮೇಲಿನ ಮೋಹ ಬಿಟ್ಟು ನಿಮ್ಮ ಪಾಲಕರಿದ್ದಲ್ಲಿಗೆ ಮೊದಲು ತೆರಳಿ. ಅವನಿಗೋಸ್ಕರ ನಿಮ್ಮ ಹೆತ್ತವರನ್ನೂ ದೂರ ಮಾಡಿಕೊಳ್ಳಬೇಡಿ. ಅಲ್ಲಿಯೇ ಯಾವುದಾದರೂ ಕೆಲಸ ನೋಡಿ. ಮುಂದೆ ನಿಮ್ಮ ಮನಸ್ಸಿಗೊಪ್ಪುವವನು ಸಿಕ್ಕಿಯೇ ಸಿಗುತ್ತಾನೆ.

 

LEAVE A REPLY