ಸುಳ್ಯದಲ್ಲಿ ತೆಂಗಿಗೆ ಸುಳಿ ಕೊಳೆರೋಗ

ರೈತರು ಕಂಗಾಲು

ನಮ್ಮ ಪ್ರತಿನಿಧಿ ವರದಿ

ಸುಳ್ಯ : ತಾಲೂಕಿನ ವಿವಿಧ ಕಡೆಗಳಲ್ಲಿ ತೆಂಗಿನಮರಕ್ಕೆ ಬಾಧಿಸುವ ಸುಳಿ ಕೊಳೆರೋಗ ತೀವ್ರಗೊಂಡಿದ್ದು, ತೆಂಗಿನಮರಗಳನ್ನು ಆಹುತಿ ತೆಗೆದುಕೊಳ್ಳುತ್ತಿದೆ. ಇದೀಗ ಕಾಡುತ್ತಿರುವ ಈ ಕೊಳೆರೋಗದಿಂದ ಇಲ್ಲಿನ ಕೃಷಿಕರು ಕಂಗೆಟ್ಟಿದ್ದು, ಕಣ್ಣೀರಿಡುವಂತಾಗಿದೆ.

ಇಲ್ಲಿನ ಪ್ರಭಾಕರನ್ ನಾಯಕ್ ಅವರ ಅರಂತೋಡಿನ ತೋಟದಲ್ಲಿ ತೆಂಗಿನಮರಗಳು ಈ ರೋಗಕ್ಕೆ ಬಲಿಯಾಗಿವೆ. ಅತ್ಯುತ್ತಮ ಫಸಲು ನೀಡುತ್ತಿದ್ದ 25-30 ವರ್ಷದ ತೆಂಗಿನಮರಗಳೇ ಸತ್ತು ಹೋಗುತ್ತಿದೆ. ಕೊಳೆರೋಗದಿಂದ ಮಡಲು ಹಸಿರು ಬಣ್ಣಕ್ಕೆ ತಿರುಗುತ್ತದೆ. ಸಿರಿಯ ಕೆಳಗಿನ ಭಾಗ ಕೊಳೆತು ಹೋಗಿ ದುರ್ವಾಸನೆ ಬರುತ್ತದೆ. ತೆಂಗಿನ ಸಿರಿ ಕರಟಿ ತೆಂಗಿನಮರ ಪೂರ್ತಿ ಸಾಯುತ್ತದೆ. ಆದರೆ ತೆಂಗಿನಕಾಯಿ ತಿಂಗಳುಗಟ್ಟಲೆ ಹಸಿರಾಗಿಯೇ ಇರುತ್ತದೆ. ಈ ರೋಗ ಬಾಧಿಸಿರುವುದು ಕೂಡಾ ರೈತರಿಗೆ ಗೊತ್ತಾಗದಿರುವ ಕಾರಣ ಗೊತ್ತಾಗುವಷ್ಟರ ವೇಳೆಗೆ ಮರ ಪೂರ್ತಿ ಸತ್ತು ಹೋಗಿರುತ್ತದೆ…! ಒಂದು ಮರಕ್ಕೆ ಈ ರೋಗ ಬಾಧಿಸಿದರೆ, ತೋಟವಿಡೀ ರೋಗಕ್ಕೆ ತುತ್ತಾಗುತ್ತದೆ.

“ನನ್ನ ತೋಟದಲ್ಲಿ ಸುಮಾರು 240 ತೆಂಗಿನಮರಗಳಿದ್ದು, 50ಕ್ಕೂ ಅಧಿಕ ಮರಗಳಿಗೆ ರೋಗ ಬಾಧಿಸಿದೆ. ಏನೇ ಔಷಧಿ ಸಿಂಪಡಣೆ ಮಾಡಿದರೂ ಪ್ರಯೋಜನವಾಗಿಲ್ಲ. ಮರಕ್ಕೆ ಬಿಸಿ ನೀರು ಬಿದ್ದು ಬೆಂದು ಹೋದಂತೆ ಕಂಡುಬರುತ್ತದೆ. ಕಷ್ಟದಿಂದ ಸಾಕಿದ ಬಹುತೇಕ ಮರಗಳು ಸಾವನ್ನಪ್ಪುತ್ತಿವೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪ್ರಭಾಕರನ್ ನಾಯರ್.

“ಈ ರೋಗ ನಿಯಂತ್ರಿಸಲು ಸುಳಿ ಕೊಳೆತ ಭಾಗವನ್ನು ಸ್ವಚ್ಛಗೊಳಿಸಿ 40 ಗ್ರಾಂ ಕಾಪರ್ ಆಕ್ಸಿಕ್ಲೋರೆಡ್ 10 ಲೀಟರ್ ನೀರಿನಲ್ಲಿ ಬೆರೆಸಿ ಸುಳಿಯ ಮತ್ತು ಸಂದುಗಳಿಗೆ ಸುರಿಯಬೇಕು. ಮಳೆಗಾಲದ ಆರಂಭಕ್ಕೂ ಮುನ್ನ ಬೋಡೋ ಮೊದಲಾದ ಔಷಧಿಗಳನ್ನು ಸಿಂಪಡಿಸಿದರೆ ಈ ರೋಗವನ್ನು ಬಹುತೇಕ ತಡೆಗಟ್ಟಬಹುದು” ಎನುತ್ತಾರೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೊಗೇಶ್.