ಕೋರ್ಟ್ ಆದೇಶದ ಬಳಿಕವೂ ಗೊಂದಲದಲ್ಲಿರುವ ಕರಾವಳಿಯ ಮದ್ಯದಂಗಡಿ ವ್ಯಾಪಾರಿಗಳು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಹೆದ್ದಾರಿ ವ್ಯಾಪ್ತಿಯಲ್ಲಿ 500 ಮೀ ಅಂತರದೊಳಗಿನ ಮದ್ಯದಂಗಡಿ ಸ್ಥಳಾಂತರಿಸುವ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ ಪ್ರಸಕ್ತ ಸಾಲಿನ ಪರವಾನಿಗೆ ಜೂ 30ಕ್ಕೆ ಮುಗಿಯುತ್ತಿದ್ದು, ಮುಂದಿನ ಅವಧಿಗೆ ನವೀಕರಣದ ಬಗ್ಗೆ ಸರಕಾರದಿಂದ ಯಾವುದೇ ಆದೇಶ ಬಂದಿರದ ಕಾರಣ ಮದ್ಯದಂಗಡಿ ಮಾಲಿಕರು ಮುಂದೇನು ಮಾಡಬೇಕೆನ್ನುವ ಗೊಂದಲ ಎದುರಿಸುತ್ತಿದ್ದಾರೆ.

ನ್ಯಾಯಾಲಯದ ಆದೇಶದಂತೆ ತೆರವುಗೊಳ್ಳಬೇಕಾದ ಮದ್ಯದಂಗಡಿಗಳ ಬಗ್ಗೆಯೂ ಸೂಕ್ತ ನಿರ್ಧಾರ ಪ್ರಕಟವಾಗದ ಹಿನ್ನೆಲೆಯಲ್ಲಿ ಅವರು ತೊಂದರೆ ಅನುಭವಿಸುತ್ತಿದ್ದರೆ, ನ್ಯಾಯಾಲಯದ ಆದೇಶಕ್ಕೊಳಪಡದ ಮದ್ಯದಂಗಡಿಗಳ ಪರವಾನಗಿ ನವೀಕರಣ ಕೂಡ ಬಾಕಿ ಉಳಿದುಕೊಂಡಿದೆ. ಒಟ್ಟಿನಲ್ಲಿ ಗೊಂದಲದ ವಾತಾವರಣ ಕಳೆದ 6 ತಿಂಗಳಿನಿಂದ ಮದ್ಯದಂಗಡಿ ವ್ಯಾಪಾರಿಗಳನ್ನು ಆತಂಕಕ್ಕೀಡುಮಾಡಿದೆ.

ಕಾರ್ಕಳ ತಾಲೂಕಿನಲ್ಲಿ 500 ಮೀ ಅಂತರದೊಳಗಿನ ಮದ್ಯದಂಗಡಿ ತೆರವುಗೊಳಿಸುವಂತೆ ಹೊರಡಿಸಿದ ಮೊದಲ ಆದೇಶದ ಸಂದರ್ಭ ವ್ಯಾಪಾರಿಗಳಿಗೆ ತೊಂದರೆಯಾಗಿತ್ತು. ಆದರೆ ಬದಲಾದ ಆದೇಶದಂತೆ 20 ಸಾವಿರ ಜನಸಂಖ್ಯೆ ಹೊಂದಿರುವ ಸ್ಥಳೀಯಾಡಳಿತದ ವ್ಯಾಪ್ತಿಗೊಳಪಟ್ಟ ಮದ್ಯದಂಗಡಿಗಳು, ಹೆದ್ದಾರಿಗಿಂತ 500 ಮೀ ವ್ಯಾಪ್ತಿಯೊಳಗೆ ಈ ನಿಯಮ ಅನ್ವಯವಾಗುತ್ತದೆ. 20 ಸಾವಿರ ಜನಸಂಖ್ಯೆಗಿಂತ ಕಡಿಮೆ ಇರುವ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಹೆದ್ದಾರಿಗಿಂತ 220 ಮೀ ವ್ಯಾಪ್ತಿಯೊಳಗೆ ಈ ನಿಯಮ ಅನ್ವಯಗೊಳ್ಳಲಿದೆ. ಅದರಂತೆ ಕಾರ್ಕಳ ತಾಲೂಕಿನಲ್ಲಿ ಎ ಐ ಎಸ್ ಎಲ್, ಸಿಎಲ್-2, ಸಿಎಲ್-7 ಮತ್ತು ಸಿಎಲ್-9 ಸೇರಿದಂತೆ ಒಟ್ಟು 43 ಮದ್ಯದಂಗಡಿಗಳು ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ.

ಪುರಸಭೆ ವ್ಯಾಪ್ತಿ ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ 12 ವೈನ್ ಶಾಪ್ (ಸಿಲ್-2) ಹೆದ್ದಾರಿ ವ್ಯಾಪ್ತಿಗಿಂತ 220 ಮೀ. ಅಂತರದೊಳಗೆ ಬರುತ್ತದೆ. ಪುರಸಭೆ ವ್ಯಾಪ್ತಿ ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿರುವ 14 ಬಾರ್ (ಸಿಎಲ್-9) ಹೆದ್ದಾರಿ ವ್ಯಾಪ್ತಿಗಿಂತ 220 ಮೀ ಅಂತರದೊಳಗೆ ಬರುತ್ತದೆ.

ಪುರಸಭೆ ವ್ಯಾಪ್ತಿ ಹೊರತುಪಡಿಸಿ ಗರಾಮೀಣ ಭಾಗದಲ್ಲಿರುವ 3 ಪ್ರವಾಸೋದ್ಯಮ (ಸಿಎಲ್-7) ಪರವಾನಗಿಗಳ ಪೈಕಿ ಹೋಟೆಲ್ ಚಿರಾಗ್, ಪಾರ್-ಎವರ್ ಮತ್ತು ಮಧುರಾ ಮುಂತಾದವುಗಳು ಹೆದ್ದಾರಿ ವ್ಯಾಪ್ತಿಗಿಂತ 220 ಮೀ ಅಂತರದೊಳಗೆ ಬರುತ್ತವೆ.