ಕರಾವಳಿಯಲ್ಲಿ ಚಿಲ್ಲರೆ ಸಮಸ್ಯೆ

ಅಧಿಕಗೊಂಡ ಸಾಲದ ವ್ಯವಹಾರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರಾವಳಿ ಜಿಲ್ಲೆಗಳಾದ ಮಂಗಳೂರು ಮತ್ತು ಉಡುಪಿಯಲ್ಲಿ ಇನ್ನೂ ಹೊಸ 500 ರೂ ನೋಟು ಚಲಾವಣೆಗೆ ಬಂದಿಲ್ಲ.  ಆದರೆ ಇಂದಿನಿಂದ ಹೊಸ ನೋಟು ಪೂರೈಕೆಯಾಗುವ ಸಾಧ್ಯತೆ ಇದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರಾಘವ ಯಜಮಾನ ಹೇಳಿದರು.

ಬಹುತೇಕ ಎಟಿಎಂ ಇನ್ನೂ ಹೊಸ ನೋಟು ಅಳವಡಿಕೆಗೆ ಸಿದ್ಧಗೊಂಡಿಲ್ಲ. ಆದುದರಿಂದ ಇಲ್ಲಿ ಚಿಲ್ಲರೆಗಾಗಿ ಪರದಾಟ ಹೆಚ್ಚಾಗಿದೆ. ನಿತ್ಯದ ಗ್ರಾಹಕರಿಂದ ಅಂಗಡಿ ಮಾಲಕರು ಚೆಕ್ಕುಗಳನ್ನು ಸ್ವೀಕರಿಸಿದರೆ, ಉಳಿದವರು ಚೀಟಿಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ಇಲ್ಲಿನ ಕೆಲವು ಹೋಟೆಲುಗಳಲ್ಲಿ ಸಾಲ ರೂಪದಲ್ಲಿ ಗ್ರಾಹಕರಿಗೆ ಆಹಾರ ಪೂರೈಸುತ್ತಿವೆ. “ನಿತ್ಯದ ಗ್ರಾಹಕರಾಗಿದ್ದರೆ ಅವರ ಖಾತೆ ಕಾಯ್ದುಕೊಂಡು, ಊಟ ನೀಡಲಾಗುತ್ತಿದೆ” ಎಂದು ಹೋಟೆಲೊಂದರ ಕ್ಯಾಶಿಯರ್ ತಿಳಿಸಿದರು.

ಮಲ್ಪೆಯ ಬೋಟು ಮಾಲಕರೊಬ್ಬರು ತನ್ನ ಕೂಲಿ ಕಾರ್ಮಿಕರಿಗೆ ವೇತನ ನೀಡುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. “ಕೂಲಿ ಕಾರ್ಮಿಕರಿಗೆ ನಾನೀಗ ಅರ್ಧದಷ್ಟು ಮಾತ್ರ ಕೂಲಿ ವೇತನ ನೀಡುತ್ತಿದ್ದೇನೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಎಲ್ಲ ವೇತನ ನೀಡುವುದಾಗಿ ಭರವಸೆ ನೀಡಿದ್ದೇನೆ” ಎಂದವರು ಹೇಳಿದರು.

“ಮಾಲಕರು ನಮಗೆ ಹಳೆಯ ನೋಟುಗಳನ್ನೇ ನೀಡುತ್ತಿದ್ದು, ಅನ್ಯ ಉಪಾಯವಿಲ್ಲದೆ ಅದನ್ನು ಸ್ವೀಕರಿಸಬೇಕಾಗುತ್ತದೆ” ಎಂದು ಕಂಪೆನಿಯೊಂದರ ಉದ್ಯೋಗಿಯೊಬ್ಬರು ಹೇಳಿದರು.

“ಕಳೆದ ವಾರದವರೆಗೆ ಸಹಕಾರಿ ಸೊಸೈಟಿಗಳು ಹಳೆಯ ನೋಟು ಸ್ವೀಕರಿಸುತ್ತಿದ್ದವು. ಈ ವಾರದಿಂದ ನಿಜವಾದ ಸಮಸ್ಯೆ ಎದುರಾಗಲಿದೆ” ಎಂದು ಟ್ರಾಲ್ ಬೋಟ್ ಮೀನುಗಾರರ ಅಸೋಸಿಯೇಶನ್ ಅಧ್ಯಕ್ಷ ನಿತಿನ್ ಕುಮಾರ್ ವಿವರಿಸಿದರು.