ಕರಾವಳಿಯ ಕುವರಿ ವಿಶ್ವ ಚೆಲುವೆ

ಶ್ರೀನಿಧಿ ಶೆಟ್ಟಿ

ಮಂಗಳೂರು : ಕರಾವಳಿ ಚೆಲುವೆ ಶ್ರೀನಿಧಿ ಶೆಟ್ಟಿ 2016ನೇ ಸಾಲಿನ `ಮಿಸ್ ಸುಪ್ರಾನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತ ದೇಶ ಎರಡನೇ ಬಾರಿಗೆ ಈ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಮೂರು ವರ್ಷಗಳ ಹಿಂದೆ ಆಶಾ ಶೆಟ್ಟಿ ಈ ಕಿರೀಟವನ್ನು ಮುಡಿಗೇರಿಸಿಕೊಂಡ ಬಳಿಕ ಇದೀಗ ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದ ಕಾರ್ನಾಡು ಮತ್ತು ತಾಳಿಪಾಡಿ ಗುತ್ತಿನ ಮನೆಯ ಕುಶಾಲ ಮತ್ತು ರಮೇಶ್ ಶೆಟ್ಟಿ ದಂಪತಿಯ ಕೊನೆಯ ಪುತ್ರಿ ಶ್ರೀನಿಧಿ ಸೌಂದರ್ಯ ರಾಣಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

24ರ ಹರೆಯದ ಶ್ರೀನಿಧಿ ಪ್ರಾಥಮಿಕ ಶಿಕ್ಷಣವನ್ನು ಮುಲ್ಕಿಯ ನಾರಾಯಣಗುರು ಆಂಗ್ಲಮಾಧ್ಯಮ ಶಾಲೆಯಲ್ಲಿ ಮತ್ತು ಪಿಯುಸಿಯನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಮುಗಿಸಿ ನಂತರ ಬೆಂಗಳೂರಿನ ಮಹಾವೀರ ಜೈನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಶ್ರೀನಿಧಿ ಸುಪ್ರಾ ಸ್ಪರ್ಧೆಯ ಭಾರತೀಯ ಎಡಿಷನ್ನಿನಲ್ಲಿ ವಿಜೇತರಾದ ನಂತರ ಮೂರು ತಿಂಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಜಾಗತಿಕ ಸ್ಪರ್ಧೆಯತ್ತ ಗಮನ ಹರಿಸಿದ್ದರು.

ಶ್ರೀನಿಧಿ ಶೆಟ್ಟಿ ಪೋಲೆಂಡಿನಲ್ಲಿ ಶುಕ್ರವಾರ ಸೌಂದರ್ಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. “ವಿಶ್ವ ಸೌಂದರ್ಯ ಕಿರೀಟ ಜಯಿಸುವುದು ನನ್ನ ಕನಸಾಗಿತು”್ತ ಎಂದು ಹೇಳಿರುವ ಶ್ರೀನಿಧಿ, ಪ್ರಸ್ತುತ  ಪೋಲೆಂಡಿನಲ್ಲಿದ್ದು, ಡಿಸೆಂಬರ್ ಕೊನೆಯ ವೇಳೆಗೆ ಮುಂಬಯಿಗೆ ಆಗಮಿಸಿಲಿದ್ದಾರೆ. ನೃತ್ಯ, ಚಾರಣ ಮತ್ತು ಈಜು ಹವ್ಯಾಸ ಹೊಂದಿರುವ ಶ್ರೀನಿಧಿ ಈ ಹಿಂದೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿಯೂ ಒಲವನ್ನು ಹೊಂದಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳುವ ಆಶಯ ಹೊಂದಿದ್ದಾರೆ.