ಉಗ್ರರ ನಾಡಾಗುತ್ತಿರುವ ಕರಾವಳಿ : ಯಡ್ಯೂರಪ್ಪ

`ಉಗ್ರರಿಗೆ ಪಿಎಫೈ ಸಹಾಯ’

ನಮ್ಮ ಪ್ರತಿನಿಧಿ ವರದಿ

ಕಾರವಾರ : ಕರ್ನಾಟಕದ ಕರಾವಳಿ ಭಾಗ ಇದೀಗ ಭಯೋತ್ಪಾದಕ ಸಂಘಟನೆಗಳ ಮತ್ತು ಐ ಎಸ್ ಉಗ್ರರ ನೆಲೆಬೀಡಾಗಿದೆ. ಇಂತಹ ಉಗ್ರರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ನೆರವು ನೀಡುವ ಸಂಘಟನೆಯಾಗಿದ್ದು, ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಕುಮ್ಮಕ್ಕು ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.

ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕರಾವಳಿಯ ಭಾಗದಲ್ಲಿ ವಿಶೇಷವಾಗಿ ಭಟ್ಕಳ ವ್ಯಾಪ್ತಿಯಲ್ಲಿ ಯುವಕರನ್ನು ಭಯೋತ್ಪಾದಕ ಸಂಘಟನೆಗಳು ಬಳಸಿಕೊಂಡಿವೆ. ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ಬಳಿಕವಂತೂ ಇದು ಹೆಚ್ಚಾಗಿದೆ. ಬಿಜೆಪಿಶಾಸಕ ಡಾ ಚಿತ್ತರಂಜನ್ ಮತ್ತು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ್ ಅವರ ಹತ್ಯೆ ನಡೆಸಲಾಗಿದೆ. ಹಿಂದೂ ಸಂಘಟನೆಗಳನ್ನು ದಮನಿಸುವ ಯತ್ನ ನಡೆದಿದೆ ಎಂದರು.

“ಮುಂಬೈ ಸ್ಪೋಟಕ್ಕೆ ಬಳಸಲಾದ ಆರ್‍ಡಿಎಕ್ಸ್ ಭಟ್ಕಳದಲ್ಲಿ ತಯಾರಿಸಲಾಗಿದೆ ಎಂದ ಅವರು ಕರಾವಳಿ ಭಾಗದ ಕೆಲವು ಯುವಕರು ಗಲ್ಫ್ ದೇಶದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಇಲ್ಲಿ ಎನ್‍ಐಎ ಕಚೇರಿ ತೆರೆಯುವ ಅಗತ್ಯವಿದೆ” ಎಂದರು.