13 ಮೀನುಗಾರರ ರಕ್ಷಿಸಿದ ಕೋಸ್ಟ್ ಗಾರ್ಡ್

ಮುಳುಗುವ ಸ್ಥಿತಿಯಲ್ಲಿದ್ದ ಬೋಟ್, ಕ್ಷಿಪ್ರ ಕಾರ್ಯಚರಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಓಖಿ ಚಂಡಮಾರುತಕ್ಕೆ ಸಿಲುಕಿ ಉಡುಪಿಯ ಮಲ್ಪೆಯಿಂದ 10 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಕೇರಳ ಮೀನುಗಾರಿಕಾ ಬೋಟಿನಲ್ಲಿದ್ದ 13 ಕಾರ್ಮಿಕರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ಮೂಲಕ ರಕ್ಷಿಸಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿಯ 9 ಮಂದಿ, ಅಸ್ಸಾಂನ ಒಬ್ಬ ಹಾಗೂ ಕೇರಳದ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಕಾವಲು ಪಡೆಗೆ ಮಾಹಿತಿ ದೊರಕಿದ ಕೆಲವೇ

ಗಂಟೆಗಳ ಕಾರ್ಯಾಚರಣೆ ನಡೆಸುವ ಮೂಲಕ ಎಲ್ಲಾ ಸಿಬ್ಬಂದಿಗಳನ್ನೂ ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಯಿತು ಎಂದು ಕರ್ನಾಟಕ ಕರಾವಳಿ ಕಾವಲು ಪಡೆಯ ಕಮಾಂಡರ್ ಎಸ್ ಎಸ್ ದಸಿಲಾ ಮಾಧ್ಯಮಗಳಿಗೆ ಹೇಳಿದ್ದಾರೆ.

ನವೆಂಬರ್ 7ರಂದು ಬಾರಾಕುಡ ಎನ್ನುವ ಹೆಸರಿನ ಬೋಟ್ ಕೇರಳದ ಕೊಚ್ಚಿಯಿಂದ ಮೀನುಗಾರಿಕೆ ನಡೆಸಲೆಂದು ಸಮುದ್ರಕ್ಕೆ ಇಳಿದಿತ್ತು. ಮೀನುಗಾರಿಕೆ ಮಾಡುತ್ತಾ ಕರ್ನಾಟಕದ ಸೀಮೆ ದಾಟಿ ಬರುವಾಗ  ನವೆಂಬರ್ 27ರಂದು ಜೋರಾದ ಬಿರುಗಾಳಿಗೆ ಬೋಟ್ ಸಿಲುಕಿತ್ತು. ಡಿಸೆಂಬರ್ 2ರಂದು ಬೋಟ್ ಒಳಗಡೆ ನೀರು ನುಗ್ಗಲಾರಂಭಿಸಿತ್ತು. ಮುನ್ನೆಚ್ಚರಿಕೆ ಅರಿತ ಮೀನುಗಾರರು ನೀರನ್ನು ಹೊರಚೆಲ್ಲಲಾರಂಭಿಸಿದರು. ಈ ನಡುವೆ ಬೋಟ್ ಎಂಜಿನ್ ಕೂಡಾ ಕೆಟ್ಟು ಹೋಯಿತು. ವೈರ್‍ಲೆಸ್ ಸಂಪರ್ಕ ಕಡಿತವಾಯಿತು. ಈ ನಡುವೆ ಮೀನುಗಾರರಿಗೆ ಸಿಕ್ಕಿದ ಮೊಬೈಲ್ ಸಿಗ್ನಲ್ ಮೂಲಕ ಅವರು ತಮ್ಮ ಸ್ನೇಹಿತ ಮೀನುಗಾರರಿಗೆ ಸಂದೇಶ ರವಾನಿಸಿದ್ದು, ಅವರು ಕೇರಳದ ಕೋಸ್ಟ್ ಗಾರ್ಡ್ ಘಟಕಕ್ಕೆ ಮಾಹಿತಿ ನೀಡಿದ್ದಾರೆ.

ಬೋಟ್ ಮಾಲಕ ಸ್ಟಾಲಿನ್ ಸುದ್ದಿಗಾರರೊಂದಿಗೆ ಮಾತನಾಡಿ “ನವೆಂಬರ್ 27ರಂದು ಬಿರುಗಾಳಿಗೆ ಬೋಟ್ ಸಿಲುಕಿತ್ತು. ಬೋಟ್ ಸ್ಥಿತಿ ಸಂಪೂರ್ಣ ಹಾಳಾಗಿತ್ತು. ಈ ನಡುವೆ ಬೋಟ್‍ನೊಳಗೆ ನೀರು ನುಗ್ಗಲಾರಂಭಿಸಿದಾಗ ಬದುಕುವ ಆಸೆಯೂ ಹೊರಟು ಹೋಗಿತ್ತು. ಕೊನೆಗೆ ನಮ್ಮನ್ನು ಕೋಸ್ಟ್‍ಗಾರ್ಡ್ ಸಿಬ್ಬಂದಿಗಳು ದೇವರಾಗಿ ಬಂದು ರಕ್ಷಿಸಿದರು” ಎಂದು ವಿವರಿಸಿದರು.