ಬೆಂಗ್ರೆಯಲ್ಲಿ ಹೋವರ್ ಪೋರ್ಟ್ ನಿರ್ಮಿಸಲು ಪರಿಸರ ಅನುಮತಿ ಪಡೆದ ಕೋಸ್ಟ್ ಗಾರ್ಡ್

ನಮ್ಮ ಪ್ರತಿನಿಧಿ ವರದಿ

 ಮಂಗಳೂರು :  ಬೆಂಗ್ರೆಯಲ್ಲಿ ತಣ್ಣೀರುಬಾವಿ ಬೀಚ್ ಸಮೀಪ ಭಾರತೀಯ ಕೋಸ್ಟ್ ಗಾರ್ಡ್ ಹೋವರ್ ಪೋರ್ಟ್ ಒಂದನ್ನು ನಿರ್ಮಿಸಲಿದ್ದು ಅದಕ್ಕಾಗಿ 6.07 ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ದಕ್ಷಿಣ ವಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ ಅನುಮತಿಸಿದೆ.

ಈ ಯೋಜನೆ ದೇಶದ ಭದ್ರತೆ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಹೇಳಿರುವ ಸಮಿತಿ, ಅದಕ್ಕಾಗಿ ಆದಷ್ಟು ಕಡಿಮೆ ಮರಗಳನ್ನು ಕಡಿಯುವಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಸಲಹೆ ನೀಡಿದೆ.

ಒಟ್ಟ 320 ಕಿಮೀ ಉದ್ದದ ಕರ್ನಾಟಕ ಕರಾವಳಿ ತೀರದ ಕಣ್ಗಾವಲಿಡುವ ಹೋವರ್ ಕ್ರಾಫ್ಟ್ ಗಳಿಗಾಗಿ ಈ  ನಿಲ್ದಾಣವನ್ನು ನಿರ್ಮಿಸಲು  ಕೋಸ್ಟ್ ಗಾರ್ಡ್ ಮಂಗಳೂರು ಪ್ರಾದೇಶಿಕ ಕಚೇರಿ ನಿರ್ಧರಿಸಿದೆ.

ಸದ್ಯ ಎರಡು ಹೋವರ್ ಕ್ರಾಫ್ಟ್  ಕಾರ್ಯಾಚರಿಸುತ್ತಿದ್ದು ಇನ್ನೂ ಹೆಚ್ಚಿನ ಸಂಖ್ಯೆಯ ಹೋವರ್ ಕ್ರಾಫ್ಟುಗಳು ಇಲ್ಲಿ ನಿಯೋಜಿಸಲ್ಪಡುವ ಸೂಚನೆಯಿದೆ.

ಡಿಸೆಂಬರ್ 2015ರಲ್ಲಿಯೇ ಜಿಲ್ಲಾಡಳಿತ ಭೂಮಿ ಮಂಜೂರುಗೊಳಿಸಿದ್ದರೆ, ಅಂತಿಮ ಅನುಮತಿಗಾಗಿ ಕೋಸ್ಟ್ ಗಾರ್ಡ್ ಈ  ಪ್ರಸ್ತಾಪವನ್ನು ಕೇಂದ್ರ ಸಚಿವಾಲಯದ ಉನ್ನತಾಧಿಕಾರ ಸಮಿತಿಯ ಮುಂದಿರಿಸಿತ್ತು. ಸಮಿತಿ ಮೇ 5ರಲ್ಲಿ ನಡೆದ ಸಭೆಯಲ್ಲಿ  ಪ್ರಸ್ತಾವಿತ ಯೋಜನೆ ಜಾರಿಗೊಳಿಸಲುದ್ದೇಶಿಸಲಾಗಿರುವ ಭೂಮಿಯಲ್ಲಿ  ಅರಣ್ಯ ಇಲಾಖೆ ಬೆಳೆಸಿದ ಕ್ಯಾಸುರಿನಾ ಮರಗಳಿವೆಯೆಂದು ಹೇಳಿತಲ್ಲದೆ ಅದು ಯಾವುದೇ ವನ್ಯಧಾಮ, ರಾಷ್ಟ್ರೀಯ ಉದ್ಯಾನ, ಹುಲಿಧಾಮ ಅಥವಾ ಆನೆ ಕಾರಿಡಾರ್ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಹೇಳಿತು.  ಯೋಜನೆಗೆ ಕರಾವಳಿ ನಿಯಂತ್ರಣ ವಲಯದ ಅನುಮತಿಯಿದೆ ಹಾಗೂ ಯೋಜನೆ ಜಾರಿಯಿಂದ ಅರಣ್ಯ ಸಂರಕ್ಷಣಾ ಕಾಯಿದೆಯ ಉಲ್ಲಂಘನೆಯೇನೂ ಆಗುವುದಿಲ್ಲವೆಂದು ಅರಿತ ಸಮಿತಿ ಈ ಡೀಮ್ಡ್ ಭೂಮಿಯನ್ನು  ಯೋಜನೆಗೆ ಉಪಯೋಗಿಸಲು ಅನುಮತಿಸಿದೆ.

ಪ್ರಸಕ್ತ ನಿಲ್ದಾಣದ ಕೊರತೆಯಿಂದಾಗಿ ಕೋಸ್ಟ್ ಗಾರ್ಡಿನ ಎರಡು ಹೋವರ್ ಕ್ರಾಫ್ಟುಗಳು  ತಣ್ಣೀರುಬಾವಿ ಸಮೀಪದ  ತಾತ್ಕಾಲಿಕ ನಿಲ್ದಾಣದಲ್ಲಿ ತಂಗುತ್ತಿವೆ.