ಕ್ಯಾಂಪ್ಕೋ ಹಗರಣ ಬಗ್ಗೆ ಸಹಕಾರ ಇಲಾಖೆ ತನಿಖೆ : ಸಹಕಾರ ಸಚಿವ

ನಮ್ಮ ಪ್ರತಿನಿಧಿ ವರದಿ

ಶಿರಸಿ : “ಕ್ಯಾಂಪ್ಕೋದ ಶಿರಸಿ ಶಾಖೆಯಲ್ಲಿ ಆಗಿರುವ 3 ಕೋಟಿ ರೂ ಅವ್ಯವಹಾರದ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಅಂತಾರಾಜ್ಯ ಕಾಯಿದೆಯಡಿ ಕ್ಯಾಂಪ್ಕೋ ಬರುವದರಿಂದ ಅಗತ್ಯ ಬಿದ್ದರೆ ರಾಜ್ಯ ಸರ್ಕಾರದಿಂದ ಅಗತ್ಯ ತನಿಖೆ ನಡೆಸುತ್ತೇವೆ” ಎಂದು ಸಹಕಾರ ಸಚಿವ ಮಹದೇವ ಪ್ರಸಾದ ಹೇಳಿದರು.

ಅವರು ಶನಿವಾರ ಹಾಪ್ ಕಾಮ್ಸ್ ಆವರಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, “ಸೆಕ್ಷನ್ 64ದಡಿ ಇದು ಬರುವದಿಲ್ಲ. ಬೇರೆ ಕಾಯಿದೆ ಬರುತ್ತದೆ” ಎಂದರು.

“ಕೇಂದ್ರ ಸರ್ಕಾರದ ನೋಟ್ ನಿಷೇಧದಿಂದ ಸಹಕಾರ ಕ್ಷೇತ್ರದ ಮೇಲೆ ಬಹಳ ಪರಿಣಾಮ ಬೀರಿದೆ. ಒಂದೂವರೆ ತಿಂಗಳಿಂದ ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ ವಹಿವಾಟು ಸ್ಥಗಿತವಾಗಿದೆ. 2 ತಿಂಗಳಿಂದ ಸಾಲ ವಸೂಲಾತಿ ಕಡಿಮೆ ಆಗಿದೆ. ಅವಧಿ ಮುಗಿದ ಸಾಲ ತುಂಬಲು ಆಗುತ್ತಿಲ್ಲ. ಹಾಲು ಸೊಸೈಟಿ ಹಣ ಬಟವಾಡೆಗೂ ಸಮಸ್ಯೆ ಆಗಿದೆ. ಈಗಾಗಲೇ ಮುಖ್ಯಮಂತ್ರಿ ಕೇಂದ್ರ ಹಣಕಾಸು ಸಚಿವರಿಗೆ ಮೂರು ಪತ್ರ ಬರೆದರೂ ಪ್ರಯೋಜನ ಆಗಿಲ್ಲ. ಶೂನ್ಯ ಬಡ್ಡಿ ಸಾಲ ವಸೂಲಾತಿ 2 ತಿಂಗಳು ಮುಂದೆ ಹಾಕಿದ್ದೇವೆ” ಎಂದರು.

“ಅಡಿಕೆ ಬೆಂಬಲ ಬೆಲೆ ಬಗ್ಗೆ ಸೋಮವಾರ ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಬೆಂಬಲ ಬೆಲೆ ಖರೀದಿ ಅವಧಿ ವಿಸ್ತರಣೆಗೂ ಮನವಿ ಮಾಡತ್ತೇವೆ” ಎಂದರು.