ಬ್ಯಾಂಕ್ ಪರೀಕ್ಷೆ ಕನ್ನಡದಲ್ಲಿ ಕೋರಿ ಮೋದಿಗೆ ಸೀಎಂ ಪತ್ರ

ಬೆಂಗಳೂರು : ಇನಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಎಂಡ್ ಪರ್ಸನ್ನೆಲ್ ಸೆಲೆಕ್ಷನ್ ಆಯೋಜಿಸುವ ಬ್ಯಾಂಕ್ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಅವಕಾಶ ಕೋರಿ ತಾವು ಪ್ರಧಾನಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗವೊಂದು ಈಗಾಗಲೇ  ಸಂಬಂಧಿತ ಅಧಿಕಾರಿಗಳನ್ನು ಭೇಟಿಯಾಗಿದೆ. ಬ್ಯಾಂಕುಗಳ ಕಾರ್ಯನಿರ್ವಹಣೆ ಸುಸೂತ್ರವಾಗಬೇಕಿದ್ದರೆ ಅಧಿಕಾರಿಗಳಿಗೆ ಕನ್ನಡದ ಜ್ಞಾನ ಅಗತ್ಯ ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯ ಅನುದಾನ ಆಯೋಗವು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕೋರ್ಸುಗಳನ್ನು ಅಮಾನ್ಯಗೊಳಿಸಿರುವ ಬಗ್ಗೆ ಪ್ರಶ್ನಿಸಿದಾಗ ಈ  ಬಗ್ಗೆ ಈಗಾಗಲೇ ಪ್ರಧಾನಿಗೆ ಪತ್ರ ಬರೆದಿರುವುದಾಗಿ ಹೇಳಿದರು. ವಿಶ್ವವಿದ್ಯಾಲಯದ ಮಾಜಿ ಕುಲಪತಿಯೊಬ್ಬರು ನಡೆಸಿದ ಅವ್ಯವಹಾರಗಳಿಂದಾಗಿ ಈ ಕೋರ್ಸುಗಳು ಅಮಾನ್ಯಗೊಂಡಿದ್ದವು ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.