ಬಂಟ್ವಾಳದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ತಿಂಗಳು ಸೀಎಂ ಚಾಲನೆ : ರೈ

ಬಂಟ್ವಾಳ : ಮುಂದಿನ ಅಕ್ಟೋಬರ್ ತಿಂಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಸರಣಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು.

2 ಕೋಟಿ ರೂಪಾಯಿ ಅನುದಾನದಲ್ಲಿ ಅಭಿವೃದ್ದಿಗೊಂಡ ಮೆಲ್ಕಾರ್-ಮಾರ್ನಬೈಲು ರಸ್ತೆ ಹಾಗೂ ಹೈಮಾಸ್ಟ್ ದೀಪಗಳನ್ನು ಮಂಗಳವಾರ ಸಂಜೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ತಾಲೂಕಿನ ಹೃದಯ ಭಾಗದಲ್ಲಿ ನಿರ್ಮಾಣಗೊಂಡ ಮಿನಿ ವಿಧಾನಸೌಧ, ಕೆ ಎಸ್ ಆರ್ ಟಿ ಸಿ ಹೈಟೆಕ್ ಬಸ್ ನಿಲ್ದಾಣ, ಮೆಸ್ಕಾಂ ಕಛೇರಿ, ಬಂಟ್ವಾಳದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನಿರೀಕ್ಷಣಾ ಮಂದಿರ, ಮೇಲ್ದರ್ಜೆಗೇರಿದ ಸರಕಾರಿ ಆಸ್ಪತ್ರೆ, ಬಂಟ್ವಾಳಕ್ಕೆ ಮಂಜೂರುಗೊಂಡಿರುವ ನೂತನ ಆರ್‍ಟಿಒ ಕಚೇರಿಯನ್ನು ಮೆಲ್ಕಾರಿನಲ್ಲಿ ಸೀಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಪಂಜೆ ಮಂಗೇಶ ಭವನ, ಅಂಬೇಡ್ಕರ್ ಭವನ, ವಿವಿಧ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಬೆಂಜನಪದವು ತಾಲೂಕು ಕ್ರೀಡಾಂಗಣ ಮೊದಲಾದ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಬಂಟ್ವಾಳದಲ್ಲಿ ದೇವರಾಜು ಅರಸು ಭವನ, ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸ್ವಂತ ಕಟ್ಟಡ ಹಾಗೂ ಕಾರ್ಮಿಕ ಭವನ ನಿರ್ಮಿಸುವ ಬಗ್ಗೆ ನಿರ್ಧರಿಸಲಾಗಿದ್ದು, ಈ ಬಗ್ಗೆ ಶೀಘ್ರ ರೂಪುರೇಷೆ ಮಾಡಲಾಗುವುದು ಎಂದು ಸಚಿವ ರೈ ಹೇಳಿದರು. “ಅಭಿವೃದ್ದಿ ಕಾಮಗಾರಿಗಳು ಅದು ಕೇವಲ ಭಾಷಣ ಮಾಡಿದ ಹಾಗಲ್ಲ. ಅದನ್ನು ಕಾರ್ಯರೂಪಕ್ಕೆ ತರುವುದು ತುಂಬಾ ಕಷ್ಟದ ಕೆಲಸ. ಬಂಟ್ವಾಳ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ-ವಿಶ್ವಾಸಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರಿಸುವೆ” ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.