ವಿವಿಧ ಕಾಮಗಾರಿ ಉದ್ಘಾಟಿಸಲಿದ್ದಾರೆ ಸೀಎಂ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ 148.29 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಲಿದ್ದಾರೆ.

ಬಿ ಮೂಡ ಗ್ರಾಮದಲ್ಲಿ ಸುಮಾರು 0.90 ಎಕ್ರೆ ಜಮೀನಿನಲ್ಲಿ, 3225 ಚದರ ಮೀಟರ್ ವಿಸ್ತೀರ್ಣದ ಅಂದಾಜು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧ ಕಟ್ಟಡ, ಬಿ ಕಸ್ಬಾ ಗ್ರಾಮದಲ್ಲಿ ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿದ ನಿರೀಕ್ಷಣಾ ಮಂದಿರ ಕಟ್ಟಡ, ಬಿ ಸಿ ರೋಡಿನಲ್ಲಿ 1.50 ಎಕ್ರೆ ನಿವೇಶನದಲ್ಲಿ ಅಂದಾಜು 10.7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಬಂಟ್ವಾಳದಲ್ಲಿದ್ದ 30 ಹಾಸಿಗೆಗಳ ಹಳೆ ಆಸ್ಪತ್ರೆಯನ್ನು ಅಂದಾಜು 6.15 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿ ನಿರ್ಮಾಣವಾದ 100 ಹಾಸಿಗೆಗಳ ನೂತನ ಆಸ್ಪತ್ರೆ ಕಟ್ಟಡ, ವಿಭಾಗೀಯ ಕಚೇರಿ, 2 ಉಪ ವಿಭಾಗೀಯ ಕಚೇರಿ, ಎಚ್ ಟಿ ಮತ್ತು ಎಲ್ ಟಿ ಸಬ್ ಡಿವಿಶನ್ ಕಚೇರಿ, ಡಿವಿಜನಲ್ ಸ್ಟೋರ್ ಕಚೇರಿ, ಸೆಕ್ಷನ್ ಕಚೇರಿ, ಕ್ಯಾಶ್ ಕೌಂಟರ್ ಹಾಗೂ ಎಟಿಪಿ ಒಳಗೊಂಡಿರುವ ಬಿ ಮೂಡ ಗ್ರಾಮದಲ್ಲಿ ಅಂದಾಜು 5.16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮೆಸ್ಕಾಂ ಕಟ್ಟಡ, ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಯನ್ನು ಮೂಲವಾಗಿರಿಸಿಕೊಂಡು ಬಂಟ್ವಾಳ ಪಟ್ಟಣಕ್ಕೆ 52.79 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಮಗ್ರ ಕುಡಿಯುವ ನೀರು ಯೋಜನೆ, ಬಂಟ್ವಾಳದ ನಿರೀಕ್ಷಣಾ ಮಂದಿರ ಕೆಳಭಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಟ್ರೀ ಪಾರ್ಕ್ ಇವುಗಳನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದು, ಬಿ ಮೂಡದಲ್ಲಿ ಈ ಉದ್ದೇಶಕ್ಕಾಗಿ ಕಾದಿರಿಸಿದ 0.51 ಎಕ್ರೆ ನಿವೇಶನದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪಂಜೆ ಮಂಗೇಶರಾಯರ ಸ್ಮಾರಕ ಭವನಕ್ಕೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು ಎಂದು ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಹಾಗೂ ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ತಿಳಿಸಿದ್ದಾರೆ.