`ಜೈಲಿಗೆ ಹೋಗಿ ಬಂದವರಿಂದ ನಾವು ಪಾಠ ಕಲಿಯಬೇಕಾಗಿಲ್ಲ’

ನಮ್ಮ ಪ್ರತಿನಿಧಿ ವರದಿ

ಕಾರವಾರ : “ಬಿಜೆಪಿಯ ಅಮಿತ್ ಶಾ, ಯಡ್ಯೂರಪ್ಪ ಮೊದಲಾದವರು ಜೈಲಿಗೆ ಹೋಗಿ ಬಂದವರು, ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ರವೀಂದ್ರನಾಥ ಕಡಲತೀರದಲ್ಲಿ ಬುಧವಾರ ಆಯೋಜಿಸಿದ್ದ ಬಹುಕೋಟಿ ವೆಚ್ಚದ 67 ಕಾಮಗಾರಿಗಳಿಗೆ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು. “ಬಿಜೆಪಿ ಆಡಳಿತ ನಡೆಸುವಾಗ 3 ಮಂದಿ ಮುಖ್ಯಮಂತ್ರಿಗಳಾದರು. ರಾಜ್ಯವನ್ನು ಲೂಟಿ ಮಾಡಿದ್ದರಿಂದಲೇ ಸೀಎಂ ಯಡ್ಯೂರಪ್ಪ ಸೇರಿದಂತೆ ಸಚಿವರು, ಶಾಸಕರು ಜೈಲು ಪಾಲಾದರು. ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ. ರಾಜ್ಯದೆಲ್ಲಡೆ ಸುಳ್ಳು ಭಾಷಣಗಳಿಂದ ಜನರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿಗರು ಅಧಿವೇಶನದಲ್ಲಿ ಹಗರಣಗಳ ಕುರಿತು ಪ್ರಸ್ತಾಪ ಮಾಡಲಿ. ದಾಖಲೆಗಳೊಂದಿಗೆ ಬಂದು ಮಾತನಾಡಲಿ. ಅದರ ಬದಲು ಅನಾವಶ್ಯಕವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವ ಬದಲು ದಾಖಲೆಗಳೊಂದಿಗೆ ಚರ್ಚೆಗೆ ಬನ್ನಿ” ಎಂದು ಸವಾಲೆಸೆದರು.

“ಉಪಚುನಾವಣೆಯಲ್ಲಿ ಸೋತ ನಂತರ ಯಡ್ಯೂರಪ್ಪ ಹತಾಶರಾಗಿದ್ದಾರೆ. ಹೀಗಾಗಿ ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಮಿಶನ್ 150 ಠುಸ್ ಆದ ನಂತರ ಪರಿವರ್ತನಾ ಯಾತ್ರೆ ಎಂದು ಬೈದು ತಿರುಗುತ್ತಿದ್ದಾರೆ. ಬಿಜೆಪಿಯ ಪರಿವರ್ತನಾ ಯಾತ್ರೆ, ಜೆಡಿಎಸ್ಸಿನ ಕುಮಾರ ಪರ್ವಕ್ಕಿಂತಲೂ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಯೋಜನೆಗಳು ಜನರ ಮನ ಮುಟ್ಟಿದೆ. ಬುಧವಾರ ಒಂದೇ ದಿನ ಉತ್ತರ ಕನ್ನಡದಲ್ಲಿ 250 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇವೆ. ಕಾಂಗ್ರೆಸ್ ಸಾಧನೆಯನ್ನು ಗಮನಿಸದ ಬಿಜೆಪಿಗರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯ 5 ವರ್ಷದ ಆಡಳಿತದಲ್ಲಿ ಒಂದೇ ಒಂದು ಮೆಡಿಕಲ್ ಕಾಲೇಜು ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರ್ಕಾರ 6 ಮೆಡಿಕಲ್ ಕಾಲೇಜು ಮಾಡಿದೆ. ಸಾಮಾನ್ಯವಾಗಿ 5 ವರ್ಷ ಆಡಳಿತ ಮಾಡಿದ ಸರ್ಕಾರದ ವಿರುದ್ಧ ಅಲೆ ಇರುತ್ತದೆ. ಆದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾವುದೇ ಅಲೆ ಇಲ್ಲ. ಇದಕ್ಕೆ ನಂಜನಗೂಡು ಹಾಗೂ ಗುಂಡ್ಲಪೇಟೆಯಲ್ಲಿ ನಡೆದ ಉಪಚುನಾವಣೆ ಉತ್ತಮ ಉದಾಹರಣೆ” ಎಂದರು.

“ಐದು ಸಲ ಲೋಕಸಭಾ ಸದಸ್ಯರಾದ ಅನಂತಕುಮಾರ ಹೆಗಡೆ ಸಾಧನೆ ಸೊನ್ನೆ. ಪ್ರತಿ ಸಾರಿ ಧರ್ಮದ ಹೆಸರಿನಲ್ಲಿ ಜನರ ಭಾವನೆ ಕೆರಳಿಸಿ ಗೆಲ್ಲುವ ಅನಂತಕುಮಾರ ಹೆಗಡೆ ಮಾತಿಗೆ ಜನ ದಾರಿ ತಪ್ಪಬಾರದು. ನನ್ನ ಹೆಸರಿನಲ್ಲಿಯೂ ರಾಮ ಇದ್ದಾನೆ, ನಾನು ಕೂಡ ಹಿಂದೂ ಧರ್ಮದವನೇ” ಎಂದರು.