ಉಡುಪಿಗೆ ರಾಷ್ಟ್ರಪತಿ ಜತೆ ಸೀಎಂ ಇಲ್ಲ

ರಾಜ್ಯ ಸರಕಾರದ ಪ್ರತಿನಿಧಿಯಾಗಿ ಸಚಿವ ರಮೇಶಕುಮಾರ್

ಬೆಂಗಳೂರು : ಇಂದು ಉಡುಪಿಗೆ  ಆಗಮಿಸಿ ಖಾಸಗಿ ಆಸ್ಪತ್ರೆಯೊಂದಕ್ಕೆ ಶಿಲಾನ್ಯಾಸ ನೆರವೇರಿಸಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ  ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಜರಿರುವುದಿಲ್ಲ. ರಾಷ್ಟ್ರಪತಿಗಳೊಂದಿಗೆ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲಿ  ಉಡುಪಿ ಶ್ರೀ ಕೃಷ್ಣ ಮಠಕ್ಕೂ ಅವರೊಂದಿಗೆ ಭೇಟಿ ನೀಡಬೇಕಾದೀತೆಂಬುದೇ ಮುಖ್ಯಮಂತ್ರಿ ಕಾರ್ಯಕ್ರಮದಿಂದ ಹಿಂದೆ ಸರಿಯಲು ಕಾರಣವೆಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿ ಇದ್ದ ಕಾಲದಿಂದಲೂ ಮಠದೊಂದಿಗೆ ಅವರ ಸಂಬಂಧ ಏರಿಳಿತ ಕಂಡಿತ್ತು. 2004ರಲ್ಲಿ ಮಠದ ಆವರಣದಲ್ಲಿದ್ದ ವಿವಾದಿತ ಕನಕ ಗೋಪುರವನ್ನು ಅದಮಾರು ಮಠ ರಾಜಗೋಪುರ ನಿರ್ಮಾಣಕ್ಕೆಂದು ಕೆಡವಿದಾಗ ಮಠದೊಂದಿಗಿನ ಅವರ ಸಂಬಂಧದಲ್ಲಿ ಮತ್ತಷ್ಟು ಬಿರುಕು ಕಾಣಿಸಿಕೊಂಡಿತ್ತು.

ಪ್ರೊಟೋಕಾಲ್ ಪ್ರಕಾರ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ರಾಷ್ಟ್ರಪತಿ ಜತೆ ಅವರ ಭೇಟಿ ಸಂದರ್ಭ ಹಾಜರಿರಬೇಕಾದರೂ ಮುಖ್ಯಮಂತ್ರಿ ಕಾರ್ಯಾಲಯದಿಂದ ದೊರೆತ ಮಾಹಿತಿ ಪ್ರಕಾರ ಮುಖ್ಯಮಂತ್ರಿ ತಮ್ಮ ಪ್ರತಿನಿಧಿಯಾಗಿ ಆರೋಗ್ಯ ಸಚಿವ ಕೆ ಆರ್ ರಮೇಶ್ ಕುಮಾರ್ ಅವರನ್ನು ಕಳುಹಿಸಿಕೊಡಲಿದ್ದಾರೆ.

“ಇದೀಗ ಭೂಮಿ ಪೂಜೆ ನೆರವೇರಲಿರುವ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ ಆವರಣದಲ್ಲಿಯೇ ತಲೆಯೆತ್ತುತ್ತಿರುವ ಎನ್ನಾರೈ ಉದ್ಯಮಿ ಬಿ ಆರ್ ಶೆಟ್ಟಿ ನಿರ್ಮಿಸುತ್ತಿರುವ ಮೆಟರ್ನಿಟಿ ಆಸ್ಪತ್ರೆಯ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಈ ಹಿಂದೆ ಆಗಮಿಸಿರುವುದರಿಂದ ಅದೇ ಸ್ಥಳಕ್ಕೆ ಎರಡನೇ ಬಾರಿ ಭೇಟಿ ನೀಡಲು ಅವರು ಮನಸ್ಸು ಮಾಡಿಲ್ಲ.

ಕೃಷ್ಣ ಮಠಕ್ಕೆ ಸಂಬಂಧಿಸಿದ ವಿವಾದದಿಂದ ಮುಖ್ಯಮಂತ್ರಿ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು “ಇದು ಮುಖ್ಯ ಕಾರಣವಾಗಿರಲಿಕ್ಕಿಲ್ಲ, ಮುಖ್ಯಮಂತ್ರಿ ದೇವಸ್ಥಾನಗಳಿಗೆ ಹೋಗುತ್ತಾರಾದರೂ ಕೃಷ್ಣ ಮಠದ ಭಕ್ತರಲ್ಲ” ಎಂದಿದ್ದಾರೆ.