ಸಾಮಾಜಿಕ ನ್ಯಾಯದ ಹೆಸರೆತ್ತಲೂ ಸೀಎಂಗೆ ನೈತಿಕ ಹಕ್ಕಿಲ್ಲ : ಪ್ರಸಾದ್

ಮೈಸೂರು : ಇತ್ತೀಚಿನ ಕೆಲವು ಘಟನೆಗಳು ಸೀಎಂ ಸಿದ್ದರಾಮಯ್ಯರ ಬಣ್ಣ ಬಯಲು ಮಾಡಿವೆ. ಆದ್ದರಿಂದ ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದರು.

“ಅಂಬೇಡ್ಕರ್ ಮತ್ತು ಬಸವಣ್ಣರ ತತ್ವಾದರ್ಶಗಳ ಬಗ್ಗೆ ಮಾತನಾಡುವವರು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಇದು ನಿಜವಾದ ಸಾಮಾಜಿಕ ನ್ಯಾಯವಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಪ್ರತಿಯಾಗಿ ಲೇವಡಿ ಮಾಡಿದ ಪ್ರಸಾದ್, “ನನ್ನ ತಿಳುವಳಿಕೆಯ ಪ್ರಕಾರ ಸಿದ್ದರಾಮಯ್ಯ ಸುದ್ದಿ ಪತ್ರಿಕೆಗಳನ್ನೂ ಓದುವುದಿಲ್ಲ. ಅವರು ಬುದ್ಧ, ಬಸವಣ್ಣ ಅಥವಾ ಅಂಬೇಡ್ಕರ್ ಪುಸ್ತಕ ಓದಿರುವ ಬಗ್ಗೆಯೂ ಸಂಶಯವಾಗುತ್ತಿದೆ. ಆದರೂ ಅವರು ಈ ಕ್ರಾಂತಿಕಾರಿಗಳ ಹೆಸರನ್ನು ತನ್ನ ಪ್ರತಿಷ್ಠೆಗಾಗಿ ಬಳಸುತ್ತಿದ್ದಾರೆ. ಲಕ್ಷಾಂತರ ಬೆಲೆಬಾಳುವ ಕೈಗಡಿಯಾರ/ಸನ್‍ಗ್ಲಾಸುಗಳನ್ನು ಧರಿಸಿದಾಗಲೇ ಸಿದ್ದರಾಮಯ್ಯ ಎಂತಹ ಸಮಾಜವಾದಿ ಎಂಬುದು ಜನಜನಿತವಾಗಿದೆ. ಕುಟುಂಬ ಸದಸ್ಯರ ಜೊತೆಗೆ ಪ್ರಯಾಣ ಬೆಳೆಸಬೇಕಿದ್ದ ಹೆಲಿಕಾಪ್ಟರ್ ಹಾಳಾದ ಬಳಿಕ, ಸಿದ್ದರಾಮಯ್ಯ ತಿರುಪತಿಗೆ ಹೋಗಿ ಪೂಜೆ ಮಾಡಿಸಿದ್ದರು. ಇದು ಮೂಢನಂಬಿಕೆಯಲ್ಲವೇ?” ಎಂದು ಪ್ರಸಾದ್ ಪ್ರಶ್ನಿಸಿದರು.