ಸಿದ್ದು ನೇತೃತ್ವದ ರಾಜ್ಯ ನಿಯೋಗಕ್ಕೆ ಭೇಟಿ ಅವಕಾಶ ನಿರಾಕರಿಸಿದ ಪೀಎಂ

ನವದೆಹಲಿ : ಕರ್ನಾಟಕದಲ್ಲಿನ ಬರ ಪರಿಸ್ಥಿತಿ ಹಾಗೂ ಮಹದಾಯಿ ನದಿ ನೀರು ವಿವಾದ ಸಂಬಂಧ ಚರ್ಚಿಸಲು ಪ್ರಧಾನಿಯನ್ನು  ಭೇಟಿಯಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗವು ದೆಹಲಿಗೆ ಹೋಗಿದ್ದರೂ, ಪ್ರಧಾನಿ ಭೇಟಿ ಅಸಾಧ್ಯವಾದ ಕಾರಣ ಗೃಹ ಸಚಿವ ರಾಜನಾಥ ಸಿಂಗ್  ಹಾಗೂ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರನ್ನು ಕಂಡು ನಿಯೋಗ ಚರ್ಚಿಸಿದೆ.

ರಾಜ್ಯ ಸಚಿವರಾದ ಟಿ ಬಿ ಜಯಚಂದ್ರ ಮತ್ತು ಅಪ್ಪಾಜಿ  ಸಿ ಎಸ್ ನಾಡಗೌಡ ಅವರೂ ಮುಖ್ಯಮಂತ್ರಿ ನಿಯೋಗದಲ್ಲಿದ್ದರು.

ಪ್ರಧಾನಿಗೆ ಹಲವಾರು ಬಾರಿ ಪತ್ರ ಬರೆದಿರುವ ಹೊರತಾಗಿಯೂ ಭೇಟಿಗೆ ಸಮಯಾವಕಾಶ ಒದಗಿಸಿಲ್ಲ ಎಂದು  ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ದೂರಿದ್ದಾರೆ. “ಬಿಜೆಪಿಯೇತರ ಸರಕಾರಗಳ ಮುಖ್ಯಮಂತ್ರಿಗಳನ್ನು ಮೋದಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯಿಸುತ್ತಿದ್ದಾರೆ. ಸಹಕಾರಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವ ಉದ್ದೇಶ ಹೊಂದಿದ್ದ ಕೇರಳದ ನಿಯೋಗವೊಂದನ್ನೂ ಭೇಟಿಯಾಗಲು ಪ್ರಧಾನಿ ಈ ಹಿಂದೆ ನಿರಾಕರಿಸಿದ್ದರು” ಎಂದು ಹಿರಿಯ ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪ ಹೇಳುತ್ತಾರೆ.

“ತಮಗೇಕೆ ಕರ್ನಾಟಕದ ನಿಯೋಗವನ್ನು  ಭೇಟಿಯಾಗಲು ಆಗುತ್ತಿಲ್ಲ ಎಂಬುದಕ್ಕೆ ಪ್ರಧಾನಿ ಕಾರಣ ಕೂಡ ನೀಡಿಲ್ಲ” ಎಂದು ಅವರು ಆರೋಪಿಸಿದ್ದಾರೆ.