ಅರ್ಚಕರ ವೇತನ ಏರಿಸುವ ಭರವಸೆ ನೀಡಿದ ಸೀಎಂ

ಬೆಂಗಳೂರು : ಸಿ ದರ್ಜೆಯ ಮುಜರಾಯಿ ದೇವಳಗಳಲ್ಲಿ  ಸೇವೆ ಸಲ್ಲಿಸುತ್ತಿರುವ ಅರ್ಚಕರ ವಾರ್ಷಿಕ ಗೌರವಧನವನ್ನು ರೂ 50,000 ತನಕ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಲ್ಲಿ ಬುಧವಾರ ನಡೆದ ಅಖಿಲ ಕರ್ನಾಟಕ ಹಿಂದು ದೇವಸ್ಥಾನಗಳ ಅರ್ಚಕರು, ಆಗಮಿಕರು ಹಾಗೂ ಉಪಾದಿವಂತರ ಒಕ್ಕೂಟದ ರಾಜ್ಯ ಒಕ್ಕೂಟದ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಪ್ರಸಕ್ತ ಅರ್ಚಕರು  ಪ್ರತಿ ದಿನ ರೂ 100ರಂತೆ ವಾರ್ಷಿಕ ರು 36000 ಸಂಭಾವನೆ ಪಡೆಯುತ್ತಿದ್ದರೆ ಅದನ್ನು ದಿನಕ್ಕೆ ರೂ 250ಕ್ಕೆ ಏರಿಸಬೇಕೆಂಬ ಬೇಡಿಕೆಯಿದೆ ಎಂದರು. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯ ಗೌರವಧನವನ್ನು ದ್ವಿಗುಣಗೊಳಿಸಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.

ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ ಅರ್ಚಕರ ವರ್ಗಾವಣೆ, ನಿವೃತಿ ಸಂಬಂಧಿತ ನಿಯಮಗಳನ್ನು ರೂಪಿಸಲಾಗಿದ್ದರೂ ಅರ್ಚಕರ ವಿರೋಧದಿಂದಾಗಿ ಅವುಗಳನ್ನು ಜಾರಿಗೊಳಿಸಲಾಗಿಲ್ಲ ಎಂದರು. ನಿಯಮಗಳ ಬದಲಾವಣೆ ಶಿಫಾರಸು ಮಾಡಲು ಸಚಿವ ಸಂಪುಟ ಉಪ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು  ಮಾಹಿತಿ ನೀಡಿದರಲ್ಲದೆ ಅರ್ಚಕರಿಗೆ  ಹಾಗೂ ದೇವಳ ಸಿಬ್ಬಂದಿಗೆ ವಿಮಾ ಸೌಲಭ್ಯ ಹಾಗೂ ಬೆಂಗಳೂರಿನಲ್ಲೊಂದು ಅರ್ಚಕರ ಭವನ ನಿರ್ಮಿಸುವ ಬಗ್ಗೆಯೂ ಭರವಸೆ ನೀಡಿದರು.

ಒಕೆ