ಮನಪಾ ಆರೋಗ್ಯ ಕೇಂದ್ರ ಮುಚ್ಚಿ 15 ವರ್ಷ ಕಳೆದರೂ ಮೆಸ್ಕಾಂ ಪವರ್ ಬಿಲ್ ಚುಕ್ತವಾಗಿಲ್ಲ

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮನಪಾ ಆರೋಗ್ಯ ಕೇಂದ್ರ ಮುಚ್ಚಲ್ಪಟ್ಟು ಬರೋಬ್ಬರಿ 15 ವರ್ಷ ಕಳೆಯಿತು. ಆದರೆ ಮೆಸ್ಕಾಂನ ಮೀಟರ್ ರೀಡರ್ ಸಿಬ್ಬಂದಿ ಇಂದಿಗೂ ಕರೆಂಟ್ ಬಿಲ್ಲನ್ನು ಕಟ್ಟಡದೊಳಗೆ ತುರುಕಿಸಿ ಹೋಗುತ್ತಿದ್ದಾರೆ, ಕಾರಣ ಇಷ್ಟೆ… ಮಂಗಳೂರು ಮಹಾನಗರ ಪಾಲಿಕೆ ಮೆಸ್ಕಾಂ ಕರೆಂಟ್ ಬಿಲ್ಲನ್ನು ಬಾಕಿಯಿರಿಸಿದೆ.

ಮನಪಾ ಆರೋಗ್ಯ ಕೇಂದ್ರವು ಸುಮಾರು 15 ವರ್ಷಗಳ ಹಿಂದೆ ಸಿಬ್ಬಂದಿ ಕೊರತೆ ಮತ್ತು ಸಾರ್ವಜನಿಕರ ನೀರಸ ಪ್ರತಿಕ್ರಿಯೆಯಿಂದಾಗಿ ಮುಚ್ಚಲ್ಪಟ್ಟಿದೆ. ರೋಗಿಗಳ ಕೊರತೆ, ಔಷಧಿಗಳ ಕೊರತೆ ಮತ್ತು ಉಪಕರಣಗಳ ಕೊರತೆ ಇಲ್ಲಿ ಎದುರಾದ ದೊಡ್ಡ ಸಮಸ್ಯೆಗಳಾಗಿದ್ದವು. ಮುಚ್ಚುವುದಕ್ಕಿಂತ ಸ್ವಲ್ಪ ದಿನ ಮುಂಚೆ ಈ ಆರೋಗ್ಯ ಕೇಂದ್ರ ಪ್ರಥಮ ಚಿಕಿತ್ಸೆ ನೀಡುವ ಸಾಮಥ್ರ್ಯವನ್ನೂ ಹೊಂದಿರಲಿಲ್ಲ.

“ಆರೋಗ್ಯ ಕೇಂದ್ರವು 2000ನೇ ಇಸವಿಯವರೆಗೆ ಕಾರ್ಯನಿರ್ವಹಿತ್ತು. ಕೇವಲ ಮೂರು ಮಂದಿ ಸಿಬ್ಬಂದಿ ಮತ್ತು ಒಬ್ಬ ವೈದ್ಯ ಇದ್ದರು. ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಿರಿಯ ನರ್ಸ್ ಔಷಧಿಗಳನ್ನು ಸಮೀಪದ ಮೆಡಿಕಲ್ ಸ್ಟೋರುಗಳಿಂದ ತರುತ್ತಿದ್ದರು, ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಅವರು ಜ್ವರಕ್ಕೆ ಪ್ಯಾರಾಸಿಟಮಾಲ್ ಮಾತ್ರೆ ಕೊಡುವುದಕ್ಕೂ ಪ್ರಯಾಸ ಪಡುತ್ತಿದ್ದರು. ಮಲೇರಿಯಾ ರೋಗಿಗಳು ರಕ್ತಪರೀಕ್ಷೆಗಾಗಿ ಬಂದರೂ ಬೇರೆ ಲ್ಯಾಬಿಗೆ ಕಳುಹಿಸುವ ಪರಿಸ್ಥಿತಿ ಎದುರಾಗಿತ್ತು” ಎಂದು ಸ್ಥಳೀಯ ನಿವಾಸಿ ಪ್ರವೀಣ್ ಕಾಪಿಕಾಡ್ ಹೇಳಿದ್ದಾರೆ.

“ಒಬ್ಬ ಸಾಮಾನ್ಯ ವ್ಯಕ್ತಿ 500 ರೂಪಾಯಿ ನೀರು ಬಿಲ್ಲು ಪಾವತಿಸದೆ ಬಾಕಿ ಇಟ್ಟರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಮನಪಾ ಇದೀಗ ಸುಮಾರು 15 ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸದೆ ಮೆಸ್ಕಾಂ ವಂಚಿಸಿದೆ. ಇದಕ್ಕೆ ಯಾವ ಶಿಕ್ಷೆ ವಿಧಿಸಬೇಕು” ಎಂದು ಆರ್ಟಿಐ ಕಾರ್ಯಕರ್ತ ಅಜಯ್ ಡಿಸಿಲ್ವ ಪ್ರಶ್ನಿಸಿದ್ದಾರೆ.

ಆರೋಗ್ಯ ಕೇಂದ್ರವು ಮೆಸ್ಕಾಂ ಸಮೀಪದಲ್ಲಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡು ಲಕ್ಷ ರೂ ಬಿಲ್ ಮೊತ್ತ ಮನಪಾ ಬಾಕಿಯಿರಿಸಿದೆ, ಆರ್ಟಿಐ ಪ್ರಶ್ನೆಗಳನ್ನೂ ನಿರ್ಲಕ್ಷಿಸುತ್ತಿದ್ದಾರೆ ಎಂದು ಡಿಸಿಲ್ವ ಆರೋಪಿಸಿದ್ದಾರೆ.