ದ ಕ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಎಟುಕದ ಸರ್ಕಾರಿ ನೈರ್ಮಲ್ಯ ಯೋಜನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಜಿಲ್ಲೆಯು ಹಲವು ಪ್ರಶಸ್ತಿ ಪಡೆದಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶ ಇನ್ನೂ ಸಂಪೂರ್ಣ ನೈರ್ಮಲ್ಯ ಹೊಂದಿಲ್ಲ.

ಜಿಲ್ಲೆಯ 475ರಷ್ಟು ಮನೆಗಳಲ್ಲಿ ಈಗಲೂ ಶೌಚಾಲಯವಿಲ್ಲ ಎಂದು ಜಿ ಪಂ ಮೂಲಗಳು ಹೇಳಿವೆ. ಈಗ ಬಂದಿರುವ ಅರ್ಜಿಗಳಾಧರಿಸಿ ಈ ಅಂಕಿಅಂಶ ಲಭ್ಯವಾಗಿದ್ದರೂ, ಜಿಲ್ಲೆಯಲ್ಲಿ ಶೌಚಾಲಯವಿಲ್ಲದ ಮನೆಗಳ ಸಂಖ್ಯೆ ಲೆಕ್ಕ ಮೀರಿವೆ. ಇವು ತಾಂತ್ರಿಕ ಸಮಸ್ಯೆಗಳಿಂದ ಲೆಕ್ಕಕ್ಕೆ ಸಿಕ್ಕಿಲ್ಲ.

ಕೆಲವು ಕುಟುಂಬಗಳಿಗೆ ಭೂ-ದಾಖಲೆಗಳಿಲ್ಲ. ಇನ್ನು ಕೆಲವರಿಗೆ ಶೌಚಾಲಯ ನಿರ್ಮಿಸಲು ಜಾಗವಿಲ್ಲ. ಜಿಲ್ಲೆಯ ಎಸ್ಸಿ/ಎಸ್ಟಿ ಕುಟುಂಬಗಳು ಸರ್ಕಾರದ ಶೌಚಾಲಯ ನಿರ್ಮಾಣ ಯೋಜನೆಯಿಂದ ವಂಚಿತವಾಗಿವೆ. ಇವರಲ್ಲಿ ಹೆಚ್ಚಿನವರಲ್ಲಿ ಜಾಗದ ದಾಖಲೆಗಳಿಲ್ಲ ಎನ್ನಲಾಗಿದೆ.

ಬಯಲು ಶೌಚ ತಪ್ಪಿಸುವ ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿ ನಿಯಮ ಸಡಿಲಿಕೆಗೊಳಿಸಬೇಕೆಂದು ಆ ಮೂಲಗಳು ಹೇಳಿವೆ.

“ಬಯಲು ಶೌಚಾಲಯ ವಿರುದ್ಧ ಹಲವು ಆಂದೋಲನ ನಡೆಸಲಾಗಿದ್ದರೂ ಇಲ್ಲಿನ ಹಲವು ಮನೆಗಳಲ್ಲಿ ಇನ್ನೂ ಶೌಚಾಲಯ ನಿರ್ಮಾಣವಾಗಿಲ್ಲ. ಆದರೆ ಇದರರ್ಥ ಇವರು ಶೌಚಾಲಯ ನಿರ್ಮಿಸಲು ಶಕ್ತರಲ್ಲ ಎಂದಲ್ಲ. ಇವರಿಗೆ ಸರ್ಕಾರದ ಬೆಂಬಲ ಸಿಕ್ಕಿಲ್ಲ. ಕೆಲವು ಕುಟುಂಬಗಳಿಗೆ ಶೌಚಾಲಯ ನಿರ್ಮಿಸಲು ಜಾಗದ ಕೊರತೆ ಕಂಡು ಬಂದಿದೆ” ಎಂದು ಜನ ಶಿಕ್ಷಣ ಟ್ರಸ್ಟ್ (ಜೆ ಎಸ್ ಟಿ) ನಿರ್ದೇಶಕ ಶೀನ ಶೆಟ್ಟಿ ಹೇಳಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಿಸಲು ಜನರಿಗೆ ಮಾಹಿತಿ ನೀಡುವಲ್ಲಿ ಜಿ ಪಂ ವಿಫಲಗೊಂಡಿದೆ. ನಗರ ಅಥವಾ ಪಟ್ಟಣಗಳಲ್ಲಿ ಡ್ರೈನೇಜ್ ಸಮಸ್ಯೆ ಇದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಶೌಚಾಲಯ ಹಲವು ಸಮಸ್ಯೆಗೆ ಹೇತುವಾಗಿದೆ ಎಂದು ಪುತ್ತೂರು ಬೊಳುವಾರಿನ ಆರ್ ಟಿ ಐ ಕಾರ್ಯಕರ್ತ ಪ್ರಸಾದ್ ರೈ ತಿಳಿಸಿದರು. ಶೌಚಾಲಯ ನಿರ್ಮಾಣಕ್ಕೆ ಸರ್ಕಾರದ ಬೆಂಬಲ ಅತ್ಯವಶ್ಯ ಎಂದು ಸಾಮಾಜಿಕ ಹಕ್ಕು ಕಾರ್ಯಕರ್ತ ಪದ್ಮ ಮದಕಟ್ಟೆ ಹೇಳಿದರು.