ನಂದಿನಿ ನದಿಯಲ್ಲಿ ಸ್ವಚ್ಛತಾ ಕಾರ್ಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಪಿಲ ನದಿಯ ಸ್ವಚ್ಛತಾ ಕಾರ್ಯ ನಡೆಸಿರುವ ಯುವ ಬ್ರಿಗೇಡ್ ರವಿವಾರ ಕಟೀಲು ದೇವಸ್ಥಾನದ ಬದಿಯಲ್ಲಿ ಹರಿಯುವ ನಂದಿನಿ ನದಿಯ ತ್ಯಾಜ್ಯ ತೆರವು ಮಾಡಿತು.

ಸ್ವಚ್ಚತಾ ಕಾರ್ಯದಲ್ಲಿ ಯುವ ಬ್ರಿಗೇಡಿನ 300 ಕಾರ್ಯಕರ್ತರು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ 200 ಎನ್ನೆಸ್ಸೆಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬ್ರಿಗೇಡಿನ ಜಿಲ್ಲಾ ಸಂಚಾಲಕ ತಿಲಕ ಶಿಶಿಲ ಮಾರ್ಗದರ್ಶನದಂತೆ ನದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ನದಿಯಲ್ಲಿ ದೇವರ ಫೋಟೋ, ಪಿಂಡ ದಾನದ ಸೊತ್ತು, ಗಾಜು, ಪ್ಲಾಸ್ಟಿಕ್ ಚೀಲ ಹಾಗೂ ಇತರ ತ್ಯಾಜ್ಯ ತುಂಬಿ ಹೋಗಿದ್ದು, ಇದನ್ನೆಲ್ಲ ಹೊರತೆಗೆಯಲಾಯಿತು. ನದಿಯಲ್ಲಿ ಸ್ನಾನ ಮಾಡುವವರಿಗೆ ಒಡೆದ ಗಾಜುಗಳು ಅಪಾಕಾರಿಯಾಗಿದೆ.

ಕಾರ್ಯಕರ್ತರು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ಕೆಲವು ಕಡೆ ತ್ಯಾಜ್ಯ ಕೊಳೆತು ನಾರುತ್ತಿತ್ತು. ಕಾರ್ಯಕರ್ತರ ಈ ಸಮಾಜಸೇವಾ ಕಾರ್ಯಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.

ಮುಖ್ಯವಾಗಿ ದೇವಸ್ಥಾನಕ್ಕೆ ಸಂಬಂಧಿಸಿದ ಕಲ್ಯಾಣಿಗಳನ್ನು ಸಂಪೂರ್ಣ ಸ್ವಚ್ಛಗೊಳಿಸಲಾಯಿತು. ಸಂಗ್ರಹದ 6 ಲೋಡ್ ತ್ಯಾಜ್ಯ ಪ್ರತ್ಯೇಕಗೊಳಿಸಿದ ಸ್ಥಳೀಯ ಪಂಚಾಯತ್ ರಾಜ್ ಮಂಡಳಿಗೆ ಹಸ್ತಾಂತರಿಸಿತು. “ದೇವಸ್ಥಾನದ ನಿರ್ದಿಷ್ಟ ಜಾಗದಲ್ಲಿ ತ್ಯಾಜ್ಯ ಎಸೆಯಲು ಅವಕಾಶ ಕಲ್ಪಿಸಬೇಕು ಎಂದು ದೇವಸ್ಥಾನದ ಆಡಳಿತ ಅಧಿಕಾರಿಗಳಿಗೆ ನಾವು ಮನವಿ ಮಾಡಿದೆವು”  ಮುಖ್ಯ ಸ್ವಯಂಸೇವಕ ಮಂಜಯ್ಯ ಮೆರೆಂಕಿ ಹೇಳಿದರು. ಮಂಗಳೂರು, ಪುತ್ತೂರು, ಸುಳ್ಯ, ಬಂಟ್ವಾಳ, ಮೂಡಬಿದ್ರೆ ಮೊದಲಾದ ಕಡೆಗಳ ಯುವ ಬ್ರಿಗೇಡ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

LEAVE A REPLY