ಕುತ್ಯಾರು ಪ್ರದೇಶದಲ್ಲಿ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾಕಾರ್ಯ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಾರ್ಷಿಕ ಶಿಬಿರ ಕುತ್ಯಾರು ಸೂರ್ಯ ಚೈತನ್ಯ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿದ್ದು, ಅದರ ಸದಸ್ಯರು ಕುತ್ಯಾರು ಪ್ರದೇಶದಲ್ಲೆಡೆ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಗ್ರಾಮಸ್ಥರ ಪ್ರಶಂಶೆಗೆ ಪಾತ್ರರಾಗಿದ್ದಾರೆ.

ಈ ಸಂದರ್ಭ ಮಾತನಾಡಿದ ಈ ಶಿಬಿರದ ಉಸ್ತುವಾರಿ ನೋಡುತ್ತಿರುವ ಉಪನ್ಯಾಸಕ ಜಯಶಂಕರ್, “ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ಎನ್ನೆಸ್ಸೆಸ್ ಶಿಬಿರ ಕುತ್ತಾರಿನಲ್ಲಿ ನಡೆಯುತ್ತಿದ್ದು, ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆಯುವುದು ಮಾತ್ರವಲ್ಲ, ಮಕ್ಕಳ ಮುಂದಿನ ಜೀವನಕ್ಕೆ ಬೇಕಾಗುವ ಎಲ್ಲಾ ಅಂಶಗಳು ಈ ಶಿಬಿರದಿಂದ ಮಕ್ಕಳು ಪಡೆಯುವಂತಾಗಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ನಿರ್ಮಾಣದ ಕನಸಿನಂತೆ ನಮ್ಮ ಶಿಬಿರದ ಎಲ್ಲಾ ಸದಸ್ಯರು ಕುತ್ಯಾರು ಗ್ರಾಮದ ಎಲ್ಲೆಡೆ ಸ್ವಚ್ಛತಾ ಕಾರ್ಯ ನಡೆಸಿದ್ದು, ಈ ದಿನ ಮಾಗನೆದಡಿ ರಸ್ತೆಯ ಇಕ್ಕೆಲುಗಳ ಪೊದೆಗಳನ್ನು ತೆರವುಗೊಳಿಸುವ ಮೂಲಕ ಗ್ರಾಮಸ್ಥರ ಪ್ರಶಂಶೆಗೆ ಪಾತ್ರರಾಗಿದ್ದಾರೆ” ಎಂದರು.