ಸ್ಟೇಟ್ ಬ್ಯಾಂಕ್ ನಿಲ್ದಾಣ ಸುತ್ತಮುತ್ತ ಕಸಗುಡಿಸಿರಿ

ನಗರದ ಹೃದಯಭಾಗದಲ್ಲಿರುವ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಯೇ ಗೋಚರಿಸುತ್ತಿದ್ದು ಬಸ್ ನಿಲ್ದಾಣವೋ, ತ್ಯಾಜ್ಯ ಹಾಕುವ ಸ್ಥಳವೋ ಎಂದು ಗೊತ್ತಾಗುತ್ತಿಲ್ಲ ಒಂದು ಕಡೆ ನಿಲ್ದಾಣದಲ್ಲಿ ಬಸ್ ರಿಪೇರಿ ಮಾಡುವವರು ತಂತಮ್ಮ ಕೆಲಸ ಮುಗಿದ ಮೇಲೆ ಆಯಿಲ್ ತುಂಬಿದ ಕಾಟನ್ ಬಟ್ಟೆಗಳನ್ನು ಅಲ್ಲಲ್ಲಿ ಬಿಸಾಡಿ ಹೋಗುವುದು, ಆಯಿಲ್ ಟಿನ್ನುಗಳನ್ನು ಅಲ್ಲಿಯೇ ಎಸೆಯುವುದು. ಸಂಜೆ ವೇಳೆ ಹಣ್ಣು ಹಂಪಲು, ಆಮ್ಲೇಟ್ ತಳ್ಳುಗಾಡಿಗಳು ತಮ್ಮ ವ್ಯಾಪಾರ ವಹಿವಾಟು ಮುಗಿಸಿ ಹೋಗುವಾಗ ಅಲ್ಲಲ್ಲಿ ತಿಂದು ಬಿಸಾಕಿದ ಪ್ಲೇಟ್, ಲೋಟಗಳನ್ನು ಅಲ್ಲಲ್ಲಿ ಎಸೆದು ಹೋಗುವುದೆಲ್ಲ ನಡೆಯುತ್ತಿದೆ ಮತ್ತೊಂದೆಡೆ ಶೌಚಾಲಯ ವ್ಯವಸ್ಥೆ ಇದ್ದರೂ ಪರಿಸರದಲ್ಲಿ ಅತ್ತಿತ್ತ ಹೋಗಲಾರದಷ್ಟು ಮೂತ್ರದ ವಾಸನೆ ಮೂಗಿಗೆ ಬಡಿಯುತ್ತಿರುತ್ತದೆ. ಪಾಲಿಕೆ ಸೂಚಿಸಿದಲ್ಲಿ ಮೂತ್ರ ವಿಸರ್ಜಿಸದೇ ಕಂಡ ಕಂಡಲ್ಲಿ ಮೂತ್ರ ವಿಸರ್ಜಿಸುತ್ತಿರುವುದರಿಂದ ಕತ್ತಲೆಯಾಗುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ವಿಪರೀತ ಸೊಳ್ಳೆ ಕಾಟ ಶುರುವಾಗುತ್ತದೆ. ಸಂಬಂಧಪಟ್ಟ ಪಾಲಿಕೆ ಕೂಡಲೇ ಇಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಬೇಕಿದೆ ನಿಲ್ದಾಣದ ಅಲ್ಲಲ್ಲಿ ಕಸ ಹಾಕುವ ಡಸ್ಟ್ ಬಿನ್ ಇಡಬೇಕಿದೆ

  • ಗುರುಪ್ರಸಾದ್  ಬಂದರ್  ಮಂಗಳೂರು