ಮಣ್ಣಿನ ಕಲಾಕೃತಿ ರಚಿಸಿದ ಇಂಜಿನಿಯರ್ ವಿದ್ಯಾರ್ಥಿಗಳು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಜನುಮದಿನವಾದ ಸೆಪ್ಟೆಂಬರ್ 15ದನ್ನು ಇಂಜಿನಿಯರ್ಸ್ ದಿನವೆಂಬುದಾಗಿ ಕರೆಯಲ್ಪಡುವ ಹಿನ್ನೆಲೆಯಲ್ಲಿ ಮಣಿಪಾಲ ಎಂಐಟಿ ಇಂಜಿನಿಯರ್ ವಿದ್ಯಾರ್ಥಿಗಳಿಗಾಗಿ ಪಲಿಮಾರಿನ ವೆಂಕಿ ಪಲಿಮಾರ್ ಗ್ಯಾಲರಿಯಲ್ಲಿ ಆಯೋಜಿಸಲಾದ ಮೂರು ದಿನಗಳ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ವಿವಿಧ ಮಣ್ಣಿನ ಕಲಾಕೃತಿಗಳು ಅರಳಿದವು.

ಈ ಸಂದರ್ಭ ಮಾತನಾಡಿದ ವೆಂಕಿ ಪಲಿಮಾರ್, “ಮಣಿಪಾಲ ಎಂಐಟಿಯ 40ಕ್ಕೂ ಅಧಿಕ ವಿದ್ಯಾರ್ಥಿಗಳಿಗಾಗಿ ನಮ್ಮ ಗ್ಯಾಲರಿಯಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ಮಣ್ಣಿನ ಕಲಾಕೃತಿ ರಚಿಸುವ ಕಾರ್ಯಾಗಾರ ಯಶಸ್ವಿಯಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಗುಂಪಾಗಿ ಈ ಕಲಾಕೃತಿ ರಚನೆಯಲ್ಲಿ ತಲ್ಲಿನರಾಗುತ್ತಿದ್ದು, ಅವರಿಗೆ ಮಾರ್ಗದರ್ಶನ ನೀಡುವುದಕ್ಕೂ ನನಗೂ ಹಾಗೂ ನನ್ನೊಂದಿಗೆ ಶ್ರೀನಾಥ್ ಮಣಿಪಾಲಗೂ ಬಹಳ ಖುಷಿ ಇದೆ” ಎಂದರು.

ವಿದ್ಯಾರ್ಥಿಗಳ ಉಸ್ತುವಾರಿ ನೋಡುತ್ತಿದ್ದ ತೇಜಸ್ವಿನಿ ಮಾತನಾಡಿ, “ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಈ ಕ್ಲೇ ಮೊಡಲಿಂಗ್ ಕಾರ್ಯಾಗಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಕೃತಿಯ ಮಡಿಲಲ್ಲಿ ವೆಂಕಿಯವರ ಗ್ಯಾಲರಿ ಇರುವುದರಿಂದ ವಿದ್ಯಾರ್ಥಿಗಳು ಬಹಳಷ್ಟು ಉತ್ಸಾಹದಿಂದ ಕಲಾಕೃತಿ ನಿರ್ಮಾಣದಲ್ಲಿ ತೊಡಗಿದ್ದಾರೆ” ಎಂದರು.