ಶಿಕ್ಷಕರೇ ಇಲ್ಲದ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿನಿಯೇ ಟೀಚರ್

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳೆದ 2 ತಿಂಗಳಿಂದ ಟೀಚರುಗಳಿಲ್ಲದೆ ದಿನದೂಡುತ್ತಿದೆ. ಇದೇ ವೇಳೆ ಶಾಲೆಯು ಟೀಚರ ಕೊರತೆಯನ್ನು ಐದನೇ ತರಗತಿ ಆಶಿತಾ ತುಂಬುತ್ತಿದ್ದಾಳೆ. ಸುಮಾರು 29 ಮಕ್ಕಳನ್ನು ಹೊಂದಿರುವ ಈ ಶಾಲೆಯ ಐದನೇ ತರಗತಿವರೆಗಿನ ಪಾಠಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಆಶಿತಾ ಹೇಳಿಕೊಡುತ್ತಿದ್ದಾಳೆ.

ಏಕ ಶಿಕ್ಷಕರಿದ್ದ ಈ ಶಾಲೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಆ ಶಿಕ್ಷಕರೂ ತಮ್ಮ ಊರಾದ ಮೈಸೂರಿಗೆ ವರ್ಗಾವಣೆಗೊಳ್ಳುವ ಮೂಲಕ ಶಿಕ್ಷಕರಿಲ್ಲದ ಶಾಲೆಯಾಯಿತು. ಆದರೆ ಶಿಕ್ಷಕರಿಲ್ಲದೆ ಈ ಶಾಲೆ ಬಡವಾಗಿಲ್ಲ. ಅದಕ್ಕೆ ಕಾರಣ ಐದನೇ ತರಗತಿಯ ವಿದ್ಯಾರ್ಥಿನಿ ಆಶಿತಾ. “ನಾವು ದಿನ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತೇವೆ, ಪ್ರಾರ್ಥನೆ ಮಾಡುತ್ತೇವೆ, ಊಟ, ದೈಹಿಕ ತರಬೇತಿ ಮತ್ತು ಎಲ್ಲಾ ಶಾಲಾ ಚಟುವಟಿಕೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿವೆ. ನನ್ನ ಸಹಪಾಠಿಗಳು ನನಗೆ ಸಹಾಯ ಮಾಡುತ್ತಿದ್ದಾರೆ. ಸೋಮೇಶ್ವರ ತಾಲೂಕಿನ ಕೆಳ ಪ್ರದೇಶದಲ್ಲಿ ಸುಮಾರು 150 ಕುಟುಂಬಗಳು ವಾಸವಾಗಿದ್ದು, ಇದೊಂದೇ ಕಿರಿಯ ಪ್ರಾಥಮಿಕ ಶಾಲೆ. ನಾವು ಶಾಲೆ ಮುಚ್ಚುವುದಿಲ್ಲ” ಎಂದು ಹೇಳುತ್ತಾಳೆ ಆಶಿತಾ.

“ಸರ್ವಶಿಕ್ಷಾ ಅಭಿಯಾನದ ನಲಿ-ಕಲಿ ಕಾರ್ಯಕ್ರಮದಡಿಯಲ್ಲಿ ನಾವು ಬಹುದರ್ಜೆ ಶಿಕ್ಷಣಕ್ಕೆ ಉತ್ತೇಜಿಸುತ್ತೇವೆ. ಸರ್ಕಾರಿ ಶಾಲೆಯ 1ರಿಂದ ಮೂರನೇ ತರಗತಿ ಮಕ್ಕಳಿಗೆ ಒಟ್ಟಿಗೆ ಒಂದು ಕೊಠಡಿಯಲ್ಲಿ ಪಾಠ ಮಾಡಬೇಕು. ಇದರಿಂದ ಮಕ್ಕಳಿಗೆ ಒಟ್ಟಿಗೆ ಕಳೆಯುವ ಅವಕಾಶ ದೊರೆಯುತ್ತದೆ ಮತ್ತು ಒಬ್ಬರಿಗೊಬ್ಬರು ಪ್ರೋತ್ಸಾಹಿಸಿ ಸಹಕರಿಸುವ ಮನೋಭಾವನೆ ಬೆಳೆಯುತ್ತದೆ. ಈ ಶಾಲೆಗೆ ನೇಮಕವಾಗುವ ಹೆಚ್ಚಿನ ಶಿಕ್ಷಕರು ಹೊರಗಿನವರು ಮತ್ತು ಅವರಿಗೆ ವರ್ಗಾವಣೆ ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಸ್ವಂತ ಊರಿಗೆ ವರ್ಗಾವಣೆ ಮಾಡಿಕೊಂಡು ತೆರಳುತ್ತಾರೆ. ಒಂದೆರಡು ತಿಂಗಳು ಅವರ ಮನವೊಲಿಸಿ ಶಾಲೆಯಲ್ಲಿಯೇ ಉಳಿಸಿಕೊಳ್ಳಬಹುದು ಅದಕ್ಕಿಂತ ಹೆಚ್ಚೇನು ಮಾಡಲು ಸಾಧ್ಯವಾಗುವುದಿಲ್ಲ” ಎಂದು ಕುಂದಾಪುರ ಬಿಇಒ ಸೀತರ ಶೆಟ್ಟಿ ಹೇಳಿದ್ದಾರೆ.

ಈಗ ಮಕ್ಕಳು ಆಶಿತಾಳಿಂದ ಕಲಿಯುತ್ತಿದ್ದಾರೆ. ಆಕೆ 6ನೇ ತರಗತಿಗೆ ಹೋದ ಬಳಿಕ ಏನಾಗಬಹುದು ಎಂಬುದನ್ನು ಕಾದು ನೋಡಬೇಕಷ್ಟೆ.