7ನೇ ತರಗತಿ ವಿದ್ಯಾರ್ಥಿಯಿಂದ ಕ್ಯಾನ್ಸರ್ ರೋಗಿಗಳಿಗೆ ನೆರವು

ಅರಾವ್ ಹಕ್

ಕ್ಯಾನ್ಸರ್ ರೋಗಿಗಳ ನೆರವಿಗಾಗಿ 9.72 ಲಕ್ಷ ರೂ ಸಂಗ್ರಹಿಸಿರುವ ಅರಾವ್ ಶೀಘ್ರದಲ್ಲೇ ಮುಂಬಯಿ ಮಾರಥಾನ್ ಏರ್ಪಡಿಸಲು ಯೋಚಿಸುತ್ತಿದ್ದಾನೆ.
…………….

* ಐಶ್ವರ್ಯ ಸುಬ್ರಮಣ್ಯಂ
ಮುಂಬಯಿಯಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಕ್ಕಳ ನೆರವಿಗಾಗಿ ತನ್ನದೇ ಪರಿಶ್ರಮದಿಂದ ಹಣ ಸಂಗ್ರಹಿಸಿ ಅವಿರತ ಶ್ರಮಿಸುತ್ತಿರುವ ಅರಾವ್ ಹಕ್ ಸಾಮಾಜಿಕ ತಾಣಗಳಲ್ಲಿ ಎಲ್ಲೆಡೆಯಿಂದ ಶ್ಲಾಘನೆಗೊಳಗಾಗಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಸಿನಿಮಾ ಪ್ರದರ್ಶನ ಏರ್ಪಡಿಸುವುದಲ್ಲದೆ ಶ್ರಮ ವಹಿಸಿ ಕ್ಯಾನ್ಸರ್ ರೋಗಿಗಳ ನೆರವಿಗಾಗಿ 9.72 ಲಕ್ಷ ರೂ ಸಂಗ್ರಹಿಸಿರುವ ಅರಾವ್ ಶೀಘ್ರದಲ್ಲೇ ಮುಂಬಯಿ ಮಾರಥಾನ್ ಏರ್ಪಡಿಸಲು ಯೋಚಿಸುತ್ತಿದ್ದಾನೆ.
ಏಳನೇ ತರಗತಿ ವ್ಯಾಸಂಗ ಮಾಡಿರುವ ಅರಾವ್ ತನ್ನ ಸುತ್ತಲಿನ ಜನರ ಅಪಾರ ಬೆಂಬಲ ಮತ್ತು ಪ್ರೋತ್ಸಾಹದಿಂದ ಪುಳಕಿತನಾಗಿದ್ದಾನೆ. ಅನೇಕ ಜನರು ತಾವು ಹೇಗೆ ದೇಣಿಗೆ ನೀಡಬಹುದೆಂದು ಸ್ವಪ್ರೇರಿತರಾಗಿ ತಮ್ಮ ಬಳಿಗೆ ಬಂದಿರುವುದಾಗಿ ಅರಾವ್ ಹೇಳಿದ್ದಾನೆ. ತಾನು ಸಂಗ್ರಹಿಸಿದ ಹಣವನ್ನು ನರ್ಗಿಸ್ ದತ್ ಕ್ಯಾನ್ಸರ್ ಫೌಂಡೇಷನ್ನಿಗೆ ಸಲ್ಲಿಸುವ ಅರಾವ್ ಈ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ತನ್ನ ತಾಯಿಗೆ ಪ್ರೇರಣೆಯನ್ನು ಒದಗಿಸಿದ್ದಾನೆ.
ತನ್ನ ಬಿಡುವಿನ ವೇಳೆಯನ್ನು ಈ ಮಹತ್ಕಾರ್ಯಕ್ಕೆ ಬಳಸುವ ಅರಾವ್ ಜೊತೆಜೊತೆಗೇ ತನ್ನ ವ್ಯಾಸಂಗವನ್ನೂ ಮುಂದುವರೆಸಿದ್ದಾನೆ. ಶಾಲೆಯಿಂದ ಬಂದು ತನ್ನ ಪಠ್ಯ ವ್ಯಾಸಂಗವನ್ನು ಪೂರೈಸಿ ನಂತರ ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂದು ಅವನ ತಾಯಿ ಹೆಮ್ಮೆಯಿಂದ ಹೇಳುತ್ತಾರೆ.
ಕೇವಲ ಹಣ ಸಂಗ್ರಹಿಸುವುದೇ ಅಲ್ಲದೆ ಮಕ್ಕಳೊಡನೆ ಬೆರೆತು ಅವರಿಂದಲೇ ಪ್ರೇರಿತನಾಗಿ ತನ್ನ ಸತ್ಕಾರ್ಯವನ್ನು ಮುಂದುವರೆಸುತ್ತಿದ್ದಾನೆ. ಇತ್ತೀಚೆಗೆ ಅರಾವ್ ಮತ್ತು ಅವನ ತಾಯಿ ಕ್ಯಾನ್ಸರ್ ಪೀಡಿತ ನೂರು ಮಕ್ಕಳಿಗೆ `ಮಾನಾ’ ಎಂಬ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲು ಏರ್ಪಾಡು ಮಾಡಿದ್ದರು. ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ತನ್ನ ಕಾಲನ್ನೇ ಕಳೆದುಕೊಳ್ಳಲಿದ್ದ ಅನುಭವ್ ಎಂಬ ಬಾಲಕ ತನಗೆ ಪ್ರೇರಣೆಯನ್ನು ನೀಡಿದ್ದಾಗಿ ಅರಾವ್ ಹೇಳಿದ್ದಾನೆ.
ತನ್ನ ಈ ಯೋಜನೆಗಾಗಿ ಹಣ ಸಂಗ್ರಹಿಸುವ ಸಂದರ್ಭದಲ್ಲಿ ಮೊದಲ ಎರಡು ತಿಂಗಳ ಕಾಲ ಕೊಂಚ ಕಷ್ಟಕರವಾಗಿದ್ದರೂ ತನ್ನ ಸುತ್ತಲಿನ ಬಂಧುಗಳು, ಸ್ನೇಹಿತರು ಮತ್ತು ಜನಸಾಮಾನ್ಯರ ಪ್ರೋತ್ಸಾಹದಿಂದ ತಾನು ಪ್ರೇರಣೆ ಪಡೆದಿರುವುದಾಗಿ ಅರಾವ್ ಹೇಳಿದ್ದಾನೆ.
ತನ್ನ ತಾಯಿಯ ಬಂಧುಗಳು ಮತ್ತು ಸುತ್ತಮುತ್ತಲಿನ ಸ್ನೇಹಿತರು ತನಗೆ ಸಾಕಷ್ಟು ಪ್ರೋತ್ಸಾಹ ನೀಡಿರುವುದಾಗಿ ಅರಾವ್ ಹೆಮ್ಮೆಯಿಂದ ಹೇಳುತ್ತಾನೆ. ಶೀಘ್ರದಲ್ಲೇ ಆರು ಕಿಲೋಮೀಟರ್ ದೂರದ ಮಾರಥಾನ್ ಏರ್ಪಡಿಸಲು ಯೋಚಿಸುತ್ತಿರುವ ಅರಾವ್, ತಾನು ಶಾಲೆಯಲ್ಲಿ ಫುಟ್ಬಾಲ್ ಆಡುವುದು ಮತ್ತು ಓಡುವ ಅಭ್ಯಾಸ ಮಾಡುವುದರ ಮೂಲಕ ತನಗೆ ಈ ಪ್ರೇರಣೆ ದೊರೆತಿರುವುದಾಗಿ ಹೇಳಿದ್ದಾನೆ.
ತನ್ನ ಈ ಕಾರ್ಯದಲ್ಲಿ ಸಹಪಾಠಿಗಳ ಪ್ರೋತ್ಸಾಹ ಮತ್ತು ಬೆಂಬಲವೂ ಇರುವುದಾಗಿ ಅರಾವ್ ಹೇಳಿದ್ದಾನೆ. ಹಣ ಸಂಗ್ರಹಿಸುವ ವೇಳೆ ಅನೇಕರು ಮುಲಾಜಿಲ್ಲದೆ ನಿರಾಕರಿಸುವುದನ್ನು ಸಹನೆಯಿಂದಲೇ ಸ್ವೀಕರಿಸುವ ಅರಾವ್, ತನ್ನ ಸ್ನೇಹಿತರಿಗೂ ಉತ್ತೇಜನ ನೀಡುವ ಮೂಲಕ ಮುಂದುವರೆಯುತ್ತಿದ್ದಾನೆ. ತನ್ನ ಈ ಪರಿಶ್ರಮದಲ್ಲಿ ಹಿಮ್ಮೆಟ್ಟದೆ ಮುಂದುವರೆಯಲು ನಿರ್ಧರಿಸಿರುವ ಅರಾವ್ ಸಹಪಾಠಿಗಳಲ್ಲೂ ಜಾಗೃತಿ ಮೂಡಿಸಿ ತನ್ನ ಯೋಜನೆಗೆ ಕೈಜೋಡಿಸುವಂತೆ ಮಾಡಿದ್ದಾನೆ.