ಕುಕ್ಕಾಜೆ ಬಳಿ ಮತ್ತೆ ಹೊಡೆದಾಟ

ಆಸ್ಪತ್ರೆಯಲ್ಲಿ ಮಹಮ್ಮದ್

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಬಡಗನ್ನೂರು ಗ್ರಾಮದ ಈಶ್ವರಮಂಗಲ ಕುಕ್ಕಾಜೆ ಬಳಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣ ಮಾಸುವ ಮುನ್ನ ಮಂಗಳವಾರ ರಾತ್ರಿ ಮತ್ತೆ ಹೊಡೆದಾಟ ನಡೆದಿದೆ.

ಆಸ್ಪತ್ರೆಯಲ್ಲಿ  ಹಮೀದ್
ಆಸ್ಪತ್ರೆಯಲ್ಲಿ ಹಮೀದ್

ಬಡಗನ್ನೂರು ಕಾರಡ್ಕ ನಿವಾಸಿ ಅಬ್ದುಲ್ಲಾರ ಪುತ್ರ ಮಹಮ್ಮದ್ ತಾಹ (30) ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, “ನಾನು ಮನೆಯಲಿದ್ದ ವೇಳೆ ಇತ್ತೀಚೆಗೆ ನಮ್ಮ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಮಂಜೂರುಗೊಂಡ ಹಮೀದ್, ಹಂಝ, ಶಂಸುದ್ದೀನ್, ಕಲೀಲ್, ಪಕ್ರುದ್ದೀನ್ ಮತ್ತು ಅವರೊಂದಿಗಿದ್ದ ಮಹಮ್ಮದ್, ಶಫೀಕ್, ಖಾದರ್, ಸಿದ್ದಿಕ್, ಅಬೂಬಕ್ಕರ್, ಅಬ್ದುಲ್ ರಹಿಮಾನ್ ನಮ್ಮ ಮನೆಗೆ ಬಂದು ನನಗೆ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಇನ್ನೊಂದೆಡೆ ಅಂಬುಲೆನ್ಸ್ ಮೂಲಕ ಅದೇ ಆಸ್ಪತ್ರೆಗೆ ಬಂದಿದ್ದ ಕುಕ್ಕಾಜೆ ಮಸೀದಿ ಜಮಾಅತ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ (43) “ನಾನು ದಾರಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಾರಡ್ಕದಲ್ಲಿ ಕೆ ಎಚ್ ಮಹಮ್ಮದ್ ಮತ್ತು ಇಬ್ರಾಹಿಂ ಎಂಬವರು ಮೆಣಸಿನ ಹುಡಿಯನ್ನು ಕಣ್ಣಿಗೆ, ಬಾಯಿಗೆ ಹಾಕಿ ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.